ಸಂಡೂರು : ಸ್ವಯಂ ಉದ್ಯೋಗ ಮಾಡಲು ಈ ತರಬೇತಿ ಪ್ರಯೋಜನವಾಗಬೇಕು ಎನ್ನುವ ನಿಟ್ಟಿನಲ್ಲಿ ಬಿಕೆಜಿ ಫೌಂಡೇಷನ್ ವತಿಯಿಂದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡುತ್ತಿದ್ದು ಅದರ ಪೂರ್ಣ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ರಾಜಶೇಖರ ಬೆಲ್ಲದ್ ತಿಳಿಸಿದರು.
ಅವರು ಪಟ್ಟಣದ ಸುಭಾಷ್ ನಗರದಲ್ಲಿ ಬಿಕೆಜಿ ಗಣ ಕಂಪನಿಯ ಅಡಿಯಲ್ಲಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಹಾಗು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಮಹಿಳೆಯರು ಸ್ವಾವಲಂಬಿಗಳಾಗುವುದರ ಜೊತೆಗೆ ಕುಟುಂಬದ ಅರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ, ಅದ್ದರಿಂದ ಬಿಕೆಜಿ ಕಂಪನಿಯು ನಿರಂತರವಾಗಿ ತಾಲೂಕಿನ ಸೋಮಲಾಪುರ, ಯಶವಂತನಗರ, ಧರ್ಮಾಪುರ, ಸಂಡೂರಿನಲ್ಲಿ ಮಹಿಳೆಯರಿಗೆ ಈ ಸ್ವಯಂ ಪ್ರೇರಣೆಯಿಂದ ಕಲಿಯುವವರಿಗೆ ತರಬೇತಿ ನೀಡಲಾಗುತ್ತಿದೆ, ಈಗಾಗಲೇ ಬಹಳಷ್ಟು ಮಹಿಳೆಯರು ಕಲಿತು ಹಣ ಗಳಿಸುವತ್ತ ಹೆಜ್ಜೆ ಹಾಕಿದ್ದಾರೆ, ಅವರ ಕುಟುಂಬದ ನಿರ್ವಹಣೆಯನ್ನು ಉತ್ತಮವಾಗಿ ಮಾಡುವುದನ್ನು ಕಲಿತಿದ್ದಾರೆ, ಅದ್ದರಿಂದ ನೀವು ಸಹ ಈ ತರಬೇತಿಯನ್ನು ಕಲಿತಿದ್ದು, ಮುಂದೆ ಬರುವ ಕಲಿಕಾರ್ಥಿಗಳು ಸಹ ಉತ್ತಮವಾಗಿ ಕಲಿತು ಸಬಲರಾಗಿ, ಅಲ್ಲದೆ ಟಿ.ವಿ. ನೋಡುತ್ತಾ, ಮೊಬೈಲ್‍ನಲ್ಲಿ ಕಾಲ ಕಳೆಯುವುದಕ್ಕಿಂತಲೂ ಬಹು ಉತ್ತಮವಾದ ಹಾಗೂ ಪ್ರಗತಿದಾಯಕವಾದ ಕಾರ್ಯ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಾರ್ಡನ ಮುಖಂಡರಾದ ಬಸವರಾಜ ಬಣಕಾರ ಅವರು ಮಾತನಾಡಿ ಬಿಕೆಜಿ ಸಂಸ್ಥೆಯವರು ಸುಭಾಷ್ ನಗರದಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ಉಚಿತವಾಗಿ ಕಲಿಸುತ್ತಿರುವುದು ಬಹು ಹೆಮ್ಮೆಯ ಸಂಗತಿಯಾಗಿದೆ, ಇದರಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ, ಅಲ್ಲದೆ ಸಮಯದ ವ್ಯಯ ಮಾಡುವುದು ಕಲಿಕೆಯಲ್ಲಿ ಬಳಸಿದಂತಾಗುತ್ತದೆ, ಅದ್ದರಿಂದ ಪ್ರತಿಯೊಬ್ಬ ಮಹಿಳೆಯರು ಇಂದು ಪ್ರಗತಿಯತ್ತ ಹೆಜ್ಜೆ ಇಡುತ್ತಿರುವುದನ್ನು ಕಾಣುತ್ತೇವೆ, ಅದರಲ್ಲಿ ಕೆಲವರು ರೊಟ್ಟಿ ಮಾಡುವ ಉದ್ಯೋಗ, ಹಪ್ಪಳ , ಸಂಡಿಗೆ ಮಾಡುವುದು, ಅದೇ ರೀತಿ ಉಪ್ಪಿನ ಕಾಯಿ ತಯಾರಿ, ಉದುಬತ್ತಿ ತಯಾರಿ ಹೀಗೆ ಹಲವು ರೀತಿಯಲ್ಲಿ ಕಲಿಕೆ ಮಾಡಿ ಪ್ರಗತಿ ಸಾಧಿಸುತ್ತಿದ್ದಾರೆ, ಇಂದು ಬಿಕೆಜಿ ಸಂಸ್ಥೆಯವರು ಟೈಲರಿಂಗ್ ತರಬೇತಿಯನ್ನು ನೀಡಿ ಇನ್ನೂ ಹೆಚ್ಚಿನ ಪ್ರಗತಿಗೆ ಕಾರಣರಾಗಿದ್ದಾರೆ ಅದರ ಪೂರ್ಣ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಎಲ್ಲಾ ಕಲಿಕಾರ್ಥಿಗಳು ಕಲಿತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಶೋಭಾ ಇತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಸ್ವಾವಲಂಬಿಗಳಾಗಲು ಸುವರ್ಣ ಅವಕಾಶವನ್ನು ಬಿಕೆಜಿ ಸಂಸ್ಥೆ ನೀಡಿದೆ ಎಂದರು.