ವರದಿ : ನಾಗರಾಜ್ ಎನ್
ಯಶವಂತನಗರ ಗ್ರಾಮದ ರೈಲ್ವೆ ಬ್ರಿಡ್ಜ್ ಕೆಳಗೆ ಹೋಗುವ ಮುಖ್ಯರಸ್ತೆ ಮಳೆಯಾದಾಗ ಸಾರ್ವಜನಿಕರಿಗೆ ಬಹಳ ತೊಂದರೆ ಆಗುವಂತ ಸ್ಥಿತಿಗೆ ತಲುಪಿದೆ. ಮಳೆ ಬಂದರೆ ಸಾಕು, ಈ ರಸ್ತೆಯಲ್ಲಿ ವಾಹನಗಳು ಹಾಗೂ ಪಾದಚಾರಿಗಳು ಸಂಚಾರ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಮುಂದುವರೆದಿದ್ದರೂ ಕೂಡ ಎಂತಹುದೇ ಶಾಶ್ವತ ಪರಿಹಾರ ಕೈಗೊಳ್ಳಲಾಗಿಲ್ಲ. ಮಳೆಗಾಲ ಪ್ರಾರಂಭವಾದಾಗಲೆಲ್ಲಾ ಈ ರಸ್ತೆ ನೀರಿನಿಂದ ತುಂಬಿ ಸಾರ್ವಜನಿಕರ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗುತ್ತದೆ.
ಇತ್ತೀಚೆಗೆ, ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಈ ರಸ್ತೆ ತೀವ್ರವಾಗಿ ಪ್ರವಾಹಕ್ಕೆ ಒಳಗಾಯಿತು. ನೀರಿನ ರಭಸಕ್ಕೆ ರಸ್ತೆಯಲ್ಲಿ ದೊಡ್ಡ ಹಳ್ಳ ಹರಿದಿದ್ದು, ಇದರಿಂದಾಗಿ ರಸ್ತೆಯ ಎರಡೂ ಕಡೆ ಸುಮಾರು ಒಂದೂವರೆ ಗಂಟೆಗಳ ಕಾಲ ಬೈಕ್, ಕಾರು, ಬಸ್ಸು ಮತ್ತು ಲಾರಿಗಳು ನಿಂತುಕೊಂಡುವು. ಸಾರ್ವಜನಿಕರು ನೆರವಾಗಿ ನಿರೀಕ್ಷಿಸುತ್ತಿದ್ದು, ಸಂಚಾರವು ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಪ್ರತಿವರ್ಷ ಮಳೆಗಾಲದಲ್ಲಿ ಈ ರೀತಿಯ ಸ್ಥಿತಿ ಏಕೆ ಉಂಟಾಗುತ್ತಿದೆ ಎಂಬ ಪ್ರಶ್ನೆಗೆ ಸ್ಥಳೀಯರು ಉತ್ತರ ಬೇಕೆಂದು ಮುಂದಾಗಿದ್ದಾರೆ. ಸಂಬಂಧಿತ ಇಲಾಖೆ ಈ ರಸ್ತೆಗೆ ಶಾಶ್ವತ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಸಂಡೂರಿನಲ್ಲಿ ಮುಂಗಾರು ಪೂರ್ವ ಮಳೆ ಆರಂಭ:
ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಯು ಗುಡುಗು ಮಿಂಚು ಸಹಿತವಾಗಿ ಪ್ರಾರಂಭವಾಗಿದ್ದು, ಕೆಲವು ಕಡೆ ರಸ್ತೆಗೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಸಂಡೂರುನಲ್ಲಿ 10.8 ಮಿ.ಮೀ, ಕುರೆಕುಪ್ಪದಲ್ಲಿ 6.4 ಮಿ.ಮೀ ಮತ್ತು ವಿಠ್ಠಲಾಪುರದಲ್ಲಿ 18.2 ಮಿ.ಮೀ ಮಳೆಯಾಗಿರುವ ವರದಿ ದೊರೆತಿದೆ.
ಬಂಡ್ರಿ, ಯಶವಂತನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುರಿದ ಮಳೆಯಿಂದ ನಾರಿಹಳ್ಳ ನದಿ ಮೈದುಂಬಿ ಹರಿದು, ನೋಡುಗರ ಗಮನ ಸೆಳೆಯಿತು