ಸಂಡೂರು, ಮೇ 31:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಯೋಜನೆ’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಔಷಧಿ ಕೇಂದ್ರಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಂಡೂರು ತಾಲ್ಲೂಕು ಬಿಜೆಪಿ ಮಂಡಲದ ವತಿಯಿಂದ ಶುಕ್ರವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನಾ ಧರಣಿ ನಡೆಸಲಾಯಿತು.
ಸಂಡೂರು ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಇರುವ ಜನಔಷಧಿ ಕೇಂದ್ರದ ಮುಂಭಾಗದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಈ ಧರಣಿಯಲ್ಲಿ ಪ್ರಮುಖ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಧರಣಿಗೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಮ್, “ಬಡಜನರಿಗೆ ಕೈಗೆಟುಕುವ ದರದಲ್ಲಿ ಔಷಧಿ ಒದಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾರಂಭಿಸಲಾದ ಜನಔಷಧಿ ಯೋಜನೆ ಬಹುಜನರ ಆರೋಗ್ಯದ ಆಶಾಕಿರಣವಾಗಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಯೋಜನೆಗಳ ವಿರುದ್ಧ ದ್ವೇಷ ಹೊಂದಿ, ಅವುಗಳನ್ನು ಸ್ಥಗಿತಗೊಳಿಸುವ ಮೂಲಕ ಬಡವರ ಜೀವನದ ಮೇಲೆ ಕತ್ತರಿ ಹಾಕಿದೆ,” ಎಂದು ಅವರು ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಅವರು ಮಾತನಾಡಿ, “ಜನಔಷಧಿ ಕೇಂದ್ರಗಳ ಸ್ಥಗಿತದಿಂದಾಗಿ ಗ್ರಾಮೀಣ ಪ್ರದೇಶದ ಲಕ್ಷಾಂತರ ಬಡರು ಮಾರುಕಟ್ಟೆ ಬೆಲೆಯ ಔಷಧಿಗಳನ್ನು ಖರೀದಿಸಲು ಸಾಧ್ಯವಿಲ್ಲದೆ, ಅಗತ್ಯ ಚಿಕಿತ್ಸೆ ಪಡೆಯದೆ ತೊಂದರೆಗೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಈ ಕೇಂದ್ರಗಳನ್ನು ಪುನಃ ಆರಂಭಿಸಬೇಕು,” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಸಂತ್ ಕುಮಾರ್, ರವಿಕಾಂತ್ ಭೋಸ್ಲೆ, ವಿಜಯಕುಮಾರ್, ವಿಶ್ವನಾಥ್ ರೆಡ್ಡಿ,ಚಿರಂಜೀವಿ, ರಘುನಾಥ್, ಕರಡಿ ಎರ್ರಿಸ್ವಾಮಿ, ಶಂಕರ್, ವಕೀಲ ಪರಶುರಾಮ್ ಪೂಜಾರ್, ರಮೇಶ್, ದರೋಜಿ ರಮೇಶ್, ಬಸವರಾಜ್, ಪ್ರತಾಪ್, ತಾಯಪ್ಪ, ಕಿನ್ನೋರೇಶ್ವರ, ಅಂಜಿನಿ ವಕೀಲರು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಧರಣಿಯ ಮೂಲಕ ಬಿಜೆಪಿ ಸಂಡೂರು ಮಂಡಳ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ, ಜನಔಷಧಿ ಕೇಂದ್ರಗಳನ್ನು ಪುನರ್ ಆರಂಭಿಸಬೇಕೆಂಬ ಒತ್ತಾಯವನ್ನು ಮುಂದಿಟ್ಟಿತು.