ಬೆಂಗಳೂರು: ಮಾ-5, ರಾಜ್ಯದಲ್ಲಿ ಕಾನೂನು ಬಾಹಿರ ಅಶ್ಲೀಲ, ಅಸಭ್ಯ ಗೀತೆಗಳನ್ನು ರಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಾಡಿ ಮಹಿಳೆಯರ, ಮಕ್ಕಳ ಗೌರವಕ್ಕೆ ಹಾಗೂ ನಾಡಿನ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪೊಲೀಸ್ ಇಲಾಖೆಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ನೀರೀಕ್ಷಕರಿಗೆ ಪತ್ರ ಬರೆದ ನಿಮಿತ್ತ ಇಂತಹ ಪ್ರಕರಣಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ, ಠಾಣೆಗಳಿಗೆ ಪೊಲೀಸ್ ಪ್ರಧಾನ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ!


ರಾಜ್ಯದಲ್ಲಿ ಹಾಗೂ ಹೆಚ್ಚಿನದ್ದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವು ವ್ಯಕ್ತಿಗಳು ಕನ್ನಡ ಭಾಷೆ, ಶಬ್ದಗಳನ್ನು ಕೆಟ್ಟದಾಗಿ ಬಳಸಿ ಕಾನೂನು ಬಾಹಿರವಾಗಿ ಯಾವುದೇ ಸೆನ್ಸಾರ್ ಇಲ್ಲದೆ ಶಾಲೆ ಕಲಿಯುವ ವಿದ್ಯಾರ್ಥಿನಿಯರನ್ನು, ಹರೆಯದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಶ್ಲೀಲ, ಅಸಭ್ಯ ಶೀರ್ಷಿಕೆ ಮತ್ತು ಗೀತೆಗಳನ್ನು ಧ್ವಂದಾರ್ಥ ಸಂಭಾಷಣೆಗಳನ್ನು ರಚಿಸಿ ರಸ ಮಂಜರಿ ಕಾರ್ಯಕ್ರಮಗಳ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಜಾತ್ರೆ, ಉತ್ಸವ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭೆ ಸಮಾರಂಭಗಳಲ್ಲಿ ಹಾಗೂ ಟಿವಿ ಮಾಧ್ಯಮಗಳಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಅಶ್ಲೀಲತೆ ಪ್ರದರ್ಶಿಸಿ ಮಹಿಳೆಯರ ಮತ್ತು ಮಕ್ಕಳ ಘನತೆ ಗೌರವಕ್ಕೆ ಚ್ಯುತಿ ಉಂಟು ಮಾಡುತ್ತಿದ್ದಲ್ಲದೆ ಮಹಿಳೆಯರನ್ನ ತೇಜೋವಧೆ ಮಾಡುವುದು, ಯುವಜನತೆಯ ದಾರಿ ತಪ್ಪಿಸುತ್ತಾ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕಲಿಕೆಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿರುತ್ತಾರೆ, ಜಾನಪದ ಹೆಸರಿನಲ್ಲಿ ತಾಯಿ ಭಾಷೆಯನ್ನ ಅಶ್ಲೀಲಗೊಳಿಸಿ ರಚಿಸಿದ ಗೀತೆಗಳನ್ನು ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳಲ್ಲಿ ಅಕ್ರಮವಾಗಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮುಜುಗರ ಉಂಟು ಮಾಡುವ ಮೂಲಕ ಕನ್ನಡ ಭಾಷೆಯನ್ನು ಕನ್ನಡ ಸಂಸ್ಕೃತಿಯನ್ನು ಅವಮಾನಿಸಿದಂತಾಗುತ್ತಿರುತ್ತದೆ,

ಇಂತಹ ಅಶ್ಲೀಲ ಭಾಷೆಗಳಿಂದ ಯುವಕರು ಪ್ರೇರಣೆಗೊಂಡು ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುವುದು. ಅತ್ಯಾಚಾರದಂತಹ ಅಪರಾಧಗಳಿಗೆ ಪ್ರಚೋದನೆ ನೀಡಿದಂತಾಗುತ್ತಿದ್ದು ರಾಜ್ಯದ ಯುವಜನತೆಯನ್ನು ದಿಕ್ಕು ತಪ್ಪಿಸಿ, ಸಾಮಾಜಿಕ ಸ್ವಾಸ್ಥ್ಯ, ಕನ್ನಡನಾಡು, ನುಡಿ ಭಾಷೆ, ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ಹಾಗೂ ಅಶ್ಲೀಲ ಗೀತೆಗಳ ರಚಿಸುವ ವ್ಯಕ್ತಿಗಳ ವಿರುದ್ಧ ಬಿ.ಎನ್.ಎಸ್ ಕಾಯ್ದೆಯ ಸೆಕ್ಷನ್ 296 ರಡಿಯಲ್ಲಿ ಹಾಗೂ ಐಟಿ ಕಾಯ್ದೆ-2000 ಸೇರಿದಂತೆ ವಿವಿಧ ಕಾನೂನಿಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವಿಡಿಯೋಗಳನ್ನು ಅಳಿಸಿ ಹಾಕಿಸಿ ನಾಡಿನ ಸಂಸ್ಕೃತಿ, ಭಾಷೆಯನ್ನು ಹಾಗೂ ಮಹಿಳೆಯರ ಮತ್ತು ಮಕ್ಕಳ ಗೌರವ ಹಕ್ಕುಗಳನ್ನು ರಕ್ಷಿಸುವಂತೆ ಬಿ.ಎನ್.ಎಸ್. 296 ರಡಿಯಲ್ಲಿ ಆಯಾ ಠಾಣೆ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಡಿಜಿ ಮತ್ತು ಐಜಿಪಿರವರಿಗೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪತ್ರ ಬರೆದಿದ್ದರು
