Saturday, April 11, 2026
HomeVijayanagaraಕೂಡ್ಲಿಗಿ ತಾಲ್ಲೂಕಿನಲ್ಲಿ ಮಾದರಿ ಸ್ವಚ್ಛ ಸಂಕೀರ್ಣ ಘಟಕ – ಗ್ರಾಮಗಳ ನೈರ್ಮಲ್ಯಕ್ಕೆ ಹೊಸ ದಾರಿ

ಕೂಡ್ಲಿಗಿ ತಾಲ್ಲೂಕಿನಲ್ಲಿ ಮಾದರಿ ಸ್ವಚ್ಛ ಸಂಕೀರ್ಣ ಘಟಕ – ಗ್ರಾಮಗಳ ನೈರ್ಮಲ್ಯಕ್ಕೆ ಹೊಸ ದಾರಿ

ವಿಜಯನಗರ/ಕೂಡ್ಲಿಗಿ: ಜಿಲ್ಲೆಯಲ್ಲಿನ ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಸರಕಾರದ ನಿರ್ದೇಶನದಂತೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಸ್ವಚ್ಛ ಸಂಕೀರ್ಣ ಘಟಕಗಳು ಮತ್ತು ಸ್ವಚ್ಛ ವಾಹಿನಿಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಹಾಗೂ ಸಂಜೀವಿನಿ ಒಕ್ಕೂಟಗಳ ಸಹಯೋಗದೊಂದಿಗೆ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಪೈಕಿ ಕೂಡ್ಲಿಗಿ ತಾಲ್ಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿ ಸ್ವಚ್ಛತಾ ಕಾರ್ಯದಲ್ಲಿ ಮಾದರಿ ಘಟಕವಾಗಿ ಹೊರಹೊಮ್ಮಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಹಂತ–1ರಲ್ಲಿ ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ಮಿಸಿ, GPLF ಒಕ್ಕೂಟದೊಂದಿಗೆ ಒಡಂಬಡಿಕೆ ಮಾಡಿಕೊಂಡು ಆರು ಜನ ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇವರಲ್ಲಿ ಮಂಜುಳಾ ವಾಹನ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಸಿಬ್ಬಂದಿಗಳಾದ ಲಕ್ಷ್ಮಿ, ಪವಿತ್ರ, ದುರುಗಮ್ಮ, ಹನುಮಂತಮ್ಮ ಹಾಗೂ ಪವಿತ್ರ ಅವರು ಕಸ ವಿಂಗಡಣೆ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಾರಂಭದ ಎರಡು ವರ್ಷಗಳು ಗ್ರಾಮ ಪಂಚಾಯಿತಿಗಳಿಂದ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಸರ್ಕಾರ ಅನುಮತಿ ನೀಡಿದ್ದು, ನಂತರ ಸ್ವಚ್ಛ ಸಂಕೀರ್ಣ ಘಟಕಗಳನ್ನು ಸ್ವಾವಲಂಬಿಯಾಗಿ ನಡೆಸುವಂತೆ ನಿಯಮಾವಳಿ ರೂಪಿಸಲಾಗಿದೆ. ಅದರಂತೆ ಬಣವಿಕಲ್ಲು ಪಂಚಾಯಿತಿ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಹಾಗೂ ಸುರಕ್ಷತಾ ಪರಿಕರಗಳನ್ನು ಒದಗಿಸಿ, ನಿಗದಿತ ವೇಳಾಪಟ್ಟಿಯಂತೆ ಗ್ರಾಮಗಳಲ್ಲಿ ಕಸ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿದೆ.

ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಬಣವಿಕಲ್ಲು, ಎಂ.ಬಿ. ಅಯ್ಯನಹಳ್ಳಿ, ಚಿಕ್ಕ ಓಬನಹಳ್ಳಿ, ಉಲ್ಲನಹಳ್ಳಿ ಮತ್ತು ಕೆಂಚೋಬನಹಳ್ಳಿ ಸೇರಿದಂತೆ ಒಟ್ಟು ಐದು ಗ್ರಾಮಗಳು ಸೇರಿವೆ. ಈ ಗ್ರಾಮಗಳಿಂದ ಸಂಗ್ರಹವಾಗುವ ಕಸವನ್ನು ಸ್ವಚ್ಛ ಸಂಕೀರ್ಣ ಘಟಕದಲ್ಲೇ ವೈಜ್ಞಾನಿಕವಾಗಿ ವಿಂಗಡಣೆ ಮಾಡಲಾಗುತ್ತದೆ.

ಮಾರಾಟವಾಗುವ ಒಣ ಕಸದ ಲಾಭವನ್ನು ಸ್ವಚ್ಛತಾ ಸಿಬ್ಬಂದಿಗಳಿಗಾಗಿ ಪ್ರತ್ಯೇಕ ಖಾತೆಯಲ್ಲಿ ಸಂಗ್ರಹಿಸಿ, ಅವರ ಜೀವನೋಪಾಯಕ್ಕೆ ನೆರವಾಗುವಂತೆ ಮಾಡಲಾಗಿದೆ.

ಘಟಕದ ಪ್ರಮುಖ ವಿಶೇಷತೆಗಳು
ಘಟಕದಲ್ಲೇ ಕಸ ವಿಂಗಡಣೆ: ಗ್ರಾಮಗಳಿಂದ ಸಂಗ್ರಹಿಸಿದ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ಹಸಿ, ಒಣ ಹಾಗೂ ಅಪಾಯಕಾರಿ ಕಸದಂತೆ ವಿಂಗಡಿಸಲಾಗುತ್ತಿದೆ.

ಮಹಿಳಾ ವಾಹನ ಚಾಲಕಿ: ಮಂಜುಳಾ ಅವರು ತರಬೇತಿ ಪಡೆದು ಸ್ವಚ್ಛ ವಾಹಿನಿಯನ್ನು ಚಾಲನೆ ಮಾಡುತ್ತಿದ್ದು, ಇತರೆ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ.

ಸೇವಾ ಶುಲ್ಕ ಸಂಗ್ರಹಣೆ: ಮನೆಮನೆಗಳಿಂದ ದಿನಕ್ಕೆ 1 ರೂ. ಅಂತೆ ತಿಂಗಳಿಗೆ 30 ರೂ. ಸೇವಾ ಶುಲ್ಕ ವಸೂಲಾತಿ ಮಾಡಲಾಗುತ್ತಿದ್ದು, ಈ ಹಣವನ್ನು ಸಿಬ್ಬಂದಿಗಳ ವೇತನಕ್ಕೆ ಬಳಸಲಾಗುತ್ತಿದೆ.

ಮಾರ್ಗ ನಕ್ಷೆ ಮತ್ತು ವೇಳಾಪಟ್ಟಿ: ಎಲ್ಲಾ ಗ್ರಾಮಗಳನ್ನು ಒಳಗೊಂಡಂತೆ ಸೂಕ್ತ ಮಾರ್ಗ ನಕ್ಷೆ ರೂಪಿಸಿ ನಿಯಮಿತವಾಗಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ.

ಸುರಕ್ಷತಾ ವ್ಯವಸ್ಥೆ: ಸಿಬ್ಬಂದಿಗಳಿಗೆ ಸುರಕ್ಷತಾ ಪರಿಕರಗಳೊಂದಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಘಟಕದಲ್ಲಿ ಕಲ್ಪಿಸಲಾಗಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತಕುಮಾರಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ನಿರ್ಮಿಸಲಾದ ಘಟಕವನ್ನು ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ಮುನ್ನಡೆಸಲಾಗುತ್ತಿದೆ. ಇದರ ಮೂಲಕ ಗ್ರಾಮೀಣ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ ಅವರು ಮಾತನಾಡಿ, ಗ್ರಾಮಗಳ ಅಭಿವೃದ್ಧಿಯೇ ನಿಜವಾದ ಪ್ರಗತಿ ಎಂಬ ಮಹಾತ್ಮ ಗಾಂಧೀಜಿಯವರ ಆದರ್ಶವನ್ನು ಮನನ ಮಾಡಿಕೊಂಡು ಬಣವಿಕಲ್ಲು ಗ್ರಾಮ ಪಂಚಾಯಿತಿ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಇತರೆ ಘಟಕಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

SBM(G) ಜಿಲ್ಲಾ ಸಮಾಲೋಚಕ ಹನುಮಂತಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಸ್ವಚ್ಛತಾ ಸಿಬ್ಬಂದಿಗಳಿಗೆ ಪುನಃಚೇತನ ತರಬೇತಿಯನ್ನು ನೀಡಲಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಮಾಹಿತಿ–ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ, ಮಹಿಳಾ ಸ್ವಚ್ಛತಾ ಸಿಬ್ಬಂದಿಯ ಸೇವಾಭಾವ, ಪಂಚಾಯಿತಿ ಆಡಳಿತದ ಇಚ್ಛಾಶಕ್ತಿ ಮತ್ತು ಗ್ರಾಮಸ್ಥರ ಸಹಕಾರದಿಂದ ಬಣವಿಕಲ್ಲು ಗ್ರಾಮ ಪಂಚಾಯಿತಿ ಸ್ವಚ್ಛತಾ ನಿರ್ವಹಣೆಯಲ್ಲಿ ಮಾದರಿ ಘಟಕವಾಗಿ ಗುರುತಿಸಿಕೊಂಡಿದೆ. “ಹೆಣ್ಣು ಅಬಲೆಯಲ್ಲ, ಸಬಲೆ” ಎಂಬ ನಾಣ್ಣುಡಿಗೆ ತಕ್ಕಂತೆ ಇಲ್ಲಿನ ಮಹಿಳಾ ಸಿಬ್ಬಂದಿಗಳು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಾ ಸಮಾಜದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments