ಸಂಡೂರು : ಚಿತ್ರರಂಗದಲ್ಲಿ ಬಹಳಷ್ಟು ಸಂದರ್ಭದಲ್ಲಿ ಹೊಂದಿಕೊಂಡು ಹೋಗುವಂತಹ ಸ್ಥಿತಿ ಉಂಟಾಗುತ್ತದೆ, ಅಲ್ಲದೆ ಪಾತ್ರಕ್ಕೆ ತಕ್ಕ ವೇಷವನ್ನು ಹಾಕಲೇ ಬೇಕಾಗುತ್ತದೆ, ಅದರೆ ಸರೋಜಾ ದೇವಿಯವರು ಒಂದು ಶಿಸ್ತುಬದ್ಧವಾದ ನಟನೆಯನ್ನು ಮಾಡುವ ಮೂಲಕ ದಕ್ಷಿಣ ಭಾರತದ ಶ್ರೇಷ್ಠ ನಟಿಯಾಗಿ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದವರು ನಮ್ಮನ್ನು ಅಗಲಿದ್ದು ನಾಡಿಗೆ ನಷ್ಟವಾಗಿದೆ, ಅವರ ಶಿಸ್ತು, ಆಚರಣೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿ ಎಂದು ಕಸಾಪ ಅಧ್ಯಕ್ಷ ಬಿ ನಾಗನಗೌಡ ತಿಳಿಸಿದರು.
ಅವರು ಪಟ್ಟಣದ ಬಿಕೆಜಿ ಕಛೇರಿಯಲ್ಲಿ ಖ್ಯಾತ ಸಿನಿ ತಾರೆ ಬಿ ಸರೋಜಾದೇವಿ, ಮಾಜಿ ಸಭಾಪತಿಗಳು ವಕೀಲರಾದ ಎನ್ ತಿಪ್ಪಣ್ಣ, ಸಂಡೂರಿನ ನಿವೃತ್ತ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಿ ಎಂ ಕುಮಾರಸ್ವಾಮಿಯವರ ನಿಧನ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರೋಜಾ ದೇವಿಯವರು ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳಲ್ಲಿ ತಮ್ಮದೇ ಅದ ಚಾಪನ್ನು ಮೂಡಿಸುವ ಮೂಲಕ ನಾಡಿಗೆ ಕನ್ನಡದ ಸೇವೆಯನ್ನು ಸಲ್ಲಿಸಿದ್ದಾರೆ ಅವರ ಸೇವೆ ಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಶಿವಾನುಭವಗೋಷ್ಠಿ ಅಧ್ಯಕ್ಷರಾದ ಅರಳಿಕುಮಾರಸ್ವಾಮಿ ಮಾತನಾಡಿ ಕನ್ನಡ ನಾಡು ಕಂಡ ಧೀಮಂತ ನಟಿ ಬಿ ಸರೋಜಾ ದೇವಿಯವರು ಬಹು ಸುಂದರ ಹಾಗೂ ಶಿಸ್ತಿನ ಸಿಪಾಯಿಯಾಗಿದ್ದರು, ಅವರ ಮಲ್ಲಮ್ಮನ ಪವಾಡ, ಕಿತ್ತೂರು ರಾಣಿ ಚನ್ನಮ್ಮ, ಭಾಗ್ಯವಂತರು, ಶ್ರೀನಿವಾಸ ಕಲ್ಯಾಣ, ತಂದೆ ಮಕ್ಕಳು, ಬಬ್ರುವಾಹನ, ನ್ಯಾಯವೇ ದೇವರು ಚಿತ್ರಗಳು ಇಂದಿಗೂ ಸಹ ಸ್ಮರಣೀಯ ಹಾಗೂ ಆದರ್ಶವಾಗಿವೆ, ಅಂತಹ ನಟಿ ನಮ್ಮನ್ನು ಅಗಲಿದ್ದು ತುಂಬಲಾರದ ನಷ್ಟವಾಗಿದೆ, ಅದೇ ರೀತಿ ಎನ್ ತಿಪ್ಪಣ್ಣನವರು ಬಳ್ಳಾರಿ ಜಿಲ್ಲೆಯ ಖ್ಯಾತ ವಕೀಲರಾಗಿ ಸಾಮಾನ್ಯರಿಗೆ ನ್ಯಾಯ ಕೊಡಿಸುವುದರಲ್ಲಿ ಎತ್ತಿದ ಕೈಯಾಗಿದ್ದರು ಅವರ ಅಗಲಿಕೆ ಸಹ ದು:ಖವನ್ನು ಉಂಟುಮಾಡಿದೆ, ಇನ್ನೂ ನಮ್ಮವರೇ ಅದ ಬಿ ಎಂ ಕುಮಾರಸ್ವಾಮಿ ಶಿಕ್ಷಕರು ಶಿಕ್ಷಕರಿಗಾಗಿಯೇ ಶಿಕ್ಷಕರ ಕಾಲೋನಿಯನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅವರ ವೀರಶೈವ ಲಿಂಗಾಯತ ಸಮಾಜಕ್ಕೆ ಹಾಗೂ ಇತರ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.
ಸಭೆಯಲ್ಲಿ ಮಾಜಿ ಕಸಾಪ ಅಧ್ಯಕ್ಷ ಬಿ ಆರ್ ಮಸೂತಿಯವರು ಮಾತನಾಡಿ ಹಿಂದಿ ಚಿತ್ರರಂಗ, ತಮಿಳು, ತೆಲುಗು ರಂಗದಲ್ಲಿ ಛಾಪನ್ನು ಮೂಡಿಸಿದ ನಟಿ, ಅಂದಿನ ಪ್ರಧಾನಿ ನೆಹರೂ ಅವರಿಂದಲೂ ಮೆಚ್ಚುಗೆ ಪಡೆದು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದವು ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದರು.
ಸಮಾರಂಭದಲ್ಲಿ ಕೆ ಕುಮಾರಸ್ವಾಮಿ, ಹೆಚ್ ಎನ್ ಬೋಸ್ಲೆ, ಬಿ.ಎಂ. ಮಹಾಂತೇಶ್, ಕಲ್ಪನಾ, ಎಸ್.ಡಿ. ಪ್ರೇಮಲೀಲಾ, ಜಿ.ವೀರೇಶ್, ಬಷೀರ್ ಅಹ್ಮದ್, ಎ.ಎಂ.ಶಿವಮೂರ್ತಿ ಸ್ವಾಮಿ, ಶಶಿಕಲಾ, ಬಸವರಾಜ ಬಣಕಾರ ಇತರರು ಮಾತನಾಡಿದರು. ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಎಲ್ಲರಿಗೂ ಮೌನಾಚರಣೆಯನ್ನು ಸಲ್ಲಿಸಿದರು.