ಸಂಡೂರು: ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಂಸದ ಈ. ತುಕರಾಂ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು 50 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದ ಹಳೆ ಕಾಂಗ್ರೆಸ್ ಮುಖಂಡರನ್ನು ಕಡೆಗಣಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ (ವೆಂಕಟರಾವ್ ಘೋರ್ಪಡೆ) ಆರೋಪಿಸಿದ್ದಾರೆ
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗ್ಗೆ ನಾಲ್ಕು ದಿನಗಳಿಂದ ನಾನು ಕಾಂಗ್ರೆಸ್ ಕ್ಯಾಂಪ್ ಕಚೇರಿಯಲ್ಲಿ ಪಕ್ಷದ ಕೆಲಸ ಮಾಡುತ್ತಿದ್ದೆ. ಆದರೆ, ತುಕರಾಂ ಹಾಗೂ ಸಂತೋಷ್ ಲಾಡ್ ಅವರು ಪಟ್ಟಣದಲ್ಲಿ ಅವರು ಅಭ್ಯರ್ಥಿ ಪರ ನಡೆಸಿದ ಪ್ರಚಾರ ಕಾರ್ಯಕ್ಕೆ ನನ್ನನ್ನು ಆಹ್ವಾನಿಸಿಲ್ಲ ನಾಲ್ಕು ದಿನಗಳಿಂದ ಪಕ್ಷದ ಕಚೇರಿಯಲ್ಲಿ ಕುಳಿತು ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿರುವ ಪಕ್ಷದ ಹಲವು ಮುಖಂಡರೊಂದಿಗೆ ಮಾತನಾಡಿದ್ದೇನೆ. ಪಕ್ಷದ ಈ ಹಳೆಯ ನಾಯಕರನ್ನು ತುಕರಾಂ ಹಾಗೂ ಸಂತೋಷ್ ಲಾಡ್ ಅವರು ಸರಿಯಾಗಿ ಸಂಪರ್ಕಿಸಿಲ್ಲ. ಅವರು ಇದನ್ನು ಲಘುವಾಗಿ ತೆಗೆದುಕೊಂಡಿದ್ದಾರೆ ಎಂದರು.
2008ರಿಂದ ತುಕರಾಂ ಅವರು ಕಾಂಗ್ರೆಸ್ ಟಿಕೆಟ್ ಪಡೆದಾಗಿನಿಂದ ತಾಲೂಕಿನಲ್ಲಿಯ ಸಾಂಪ್ರದಾಯಿಕ ಕಾಂಗ್ರೆಸ್ ನೆಲೆಯ ಕಾರಣದಿಂದ ಗೆಲ್ಲುತ್ತಿದ್ದಾರೆ. ಸಂತೋಷ್ ಲಾಡ್ ಅವರೊಂದಿಗೆ ಕಾಂಗ್ರೆಸ್ ಸೇರಿದ್ದ ಬಹುತೇಕ ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಬಿಜೆಪಿಗೆ ಮರಳಿದ್ದಾರೆ. ಹೀಗಾಗಿಯೇ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ ಎಂದು ತಿಳಿಸಿದ್ದಾರೆ.
2008ರಲ್ಲಿ ಸಂತೋಷ್ ಲಾಡ್ ಮತ್ತು ತುಕರಾಂ ಕಾಂಗ್ರೆಸ್ ಸೇರಿದಾಗ ಮತ್ತು ಕಾಂಗ್ರೆಸ್ ಟಿಕೆಟ್ ಕೇಳಿದಾಗ ನಾನು ಅದನ್ನು ವಿರೋಧಿಸಿದ್ದೆ. ಸಂತೋಷ್ ಲಾಡ್ ಅವರು ಸೋನಿಯಾಗಾಂಧಿಯವರನ್ನು ಭೇಟಿಯಾದಾಗ, ಸಂಡೂರಿನಲ್ಲಿ ವೆಂಕಟರಾವ್ ಘೋರ್ಪಡೆ ಇದ್ದಾರೆ. ಅವರೇ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ನಿರ್ಧರಿಸುತ್ತಾರೆ ಎಂದು ಹೇಳಿ ಕಳುಹಿಸಿದ್ದರು. ಸಂತೋಷ್ ಲಾಡ್ ಅವರು ದೆಹಲಿಯಿಂದ ಮರಳಿದ ಮೇಲೆ ಸಂಡೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದ್ದರು, ಸ್ವತಂತ್ರವಾಗಿ ನಿಲ್ಲಲು ಸಿದ್ಧರಾಗುವಂತೆ ತಮ್ಮ ಅನುಯಾಯಿಗಳಿಗೆ ಹೇಳಿದ್ದರು. ಇದರಿಂದ ಪಕ್ಷ ಒಡೆಯುವ ಸಂಭವವಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ತುಕರಾಂ ಅವರಿಗೆ ಟಿಕೆಟ್ ನೀಡಲು ಕೊನೆಗೂ ಒಪ್ಪಿಕೊಂಡೆ, ತುಕರಾಂ ಹಾಗೂ ಸಂತೋಷ್ ಲಾಡ್ ಈ ವಿಷಯವನ್ನು ಇಂದು ಮರೆತಿದ್ದಾರೆ ಎಂದು ತಿಳಿಸಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಪ್ರತಿ ಮತವೂ ಮುಖ್ಯವಾಗಿದೆ.. ಆದ್ದರಿಂದ ಮುಂದಿನ ನಾಲೈದು ದಿನಗಳಲ್ಲಿ ತುಕರಾಂ ಮತ್ತು ಸಂತೋಷ್ ಲಾಡ್ ಅವರು ಎಂ.ವೈ. ಘೋರ್ಪಡೆಯವರ ಅನುಯಾಯಿಗಳಾಗಿದ್ದ ಹಳೆಯ ಕಾಂಗ್ರೆಸ್ ಮುಖಂಡರನ್ನು ಸರಿಯಾಗಿ ಸಂಪರ್ಕಿಸಿ ಬೆಂಬಲ ಪಡೆಯಬೇಕು. ಇಲ್ಲದಿದ್ದರೆ, ಈ ಉಪ ಚುನಾವಣೆ ತುಂಬಾ ಬಿಗಿಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.