ಬಳ್ಳಾರಿ,ನ.15:ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಮತದಾರರ ಪಟ್ಟಿಗೆ 18 ವರ್ಷ ಮೇಲ್ಪಟ್ಟ ಯುವ ಮತದಾರರನ್ನು ಹೆಚ್ಚು ನೋಂದಾಯಿಸುವಂತೆ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ಶುಕ್ರವಾರದಂದು, ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡೀಯೋ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಕರಡು ಮತದಾರರ ಪಟ್ಟಿಯನ್ನು ಅ.29 ರಂದು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಡಿ.28 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಮತ್ತು ಅಂತಿಮ ಮತದಾರರ ಪಟ್ಟಿಯನ್ನು 2025 ರ ಜನವರಿ 06 ರಂದು ಪ್ರಕಟಿಸಲಾಗುತ್ತದೆ. ಈ ಸಂಬAಧ ನ.23 ಮತ್ತು 24 ರಂದು ವಿಶೇಷ ಅಭಿಯಾನ ನಡೆಯಲಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮತಗಟ್ಟೆ ಕೇಂದ್ರಗಳಲ್ಲಿ ಹಾಜರಿರುವಂತೆ ಆಯಾ ತಹಶೀಲ್ದಾರರು ಮುತುವರ್ಜಿ ವಹಿಸಬೇಕು ಎಂದು ಅವರು ಸೂಚಿಸಿದರು.
ಮತದಾರರು ಹೆಸರು, ವಿಳಾಸ, ಭಾವಚಿತ್ರ ತಿದ್ದುಪಡಿ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಿಗದಿತ ನಮೂನೆಯ ಅರ್ಜಿ ನೀಡಬೇಕು. ಮಾಹಿತಿಯನ್ನು ತಪ್ಪಿಲ್ಲದಂತೆ ಭರ್ತಿ ಮಾಡಬೇಕು. ಈ ಕುರಿತು ತಹಶೀಲ್ದಾರರು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಜಿಲ್ಲೆಯಲ್ಲಿ 5,96,707 ಪುರುಷ ಮತದಾರರು, 6,22,268 ಮಹಿಳೆ ಮತದಾರರು, 211 ಇತರೆ ಮತದಾರರು ಸೇರಿ ಒಟ್ಟು 12,19,186 ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯನ್ವಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 24,304 ಮತದಾರರು 18-19 ವರ್ಷದ ಯುವ ಮತದಾರರರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಯುವ ಮತದಾರರು ಹೆಚ್ಚು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ಮತದಾರರು ನಗರ ಮತ್ತು ಹಳ್ಳಿಗಳ ಭಾಗದಲ್ಲಿ ಎರಡೂ ಕಡೆ ಮತದಾರರ ಚೀಟಿ ಹೊಂದಿರುತ್ತಾರೆ, ಮತಗಟ್ಟೆ ಅಧಿಕಾರಿಗಳು ಮನೆ ಭೇಟಿ ನಡೆಸಿ ಪರಿಶೀಲನೆ ನಡೆಸಬೇಕು. ಅಂತಹ ಮತದಾರರ ಚೀಟಿ ತೆಗೆದುಹಾಕುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರ ಜೊತೆ ಚರ್ಚಿಸಿದ ಅವರು, ಮತದಾರರ ಪಟ್ಟಿಯಲ್ಲಿ ನೋಂದಣಿ ಕುರಿತಂತೆ ಯಾವುದೇ ರೀತಿಯ ತೊಂದರೆ ಕಂಡುಬಂದಲ್ಲಿ ಸಂಬಂದಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.
ಜ.01 ಕ್ಕೆ 18 ವರ್ಷ ತುಂಬಿದವರು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ವರ್ಷದಲ್ಲಿ ನಾಲ್ಕು ಬಾರಿ ವಿಶೇಷ ಅಭಿಯಾನಗಳ ಮೂಲಕ ಅವಕಾಶ ಕಲ್ಪಿಸಿದೆ. ಹಾಗಾಗಿ ತಮ್ಮ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟವರು ಇದ್ದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿ ನೋಂದಾಯಿಸಲು ಮತ್ತು ವಿಶೇಷ ಅಭಿಯಾನಗಳಲ್ಲಿ ತಮ್ಮ ಸಹಕಾರವು ಮುಖ್ಯ ಎಂದು ಹೇಳಿದರು.
ಎಲ್ಲಾ ಪಕ್ಷದವರು ಮತಗಟ್ಟೆ ಮಟ್ಟದ ಏಜೆಂಟ್‌ಗಳನ್ನು ನೇಮಕ ಮಾಡಿ ಪಟ್ಟಿ ನೀಡಬೇಕು ಎಂದು ವಿವಿಧ ಪಕ್ಷಗಳ ಮುಖಂಡರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ರಾಜೇಶ್.ಹೆಚ್.ಡಿ ಸೇರಿದಂತೆ ತಹಶೀಲ್ದಾರರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮತ್ತೀತರರು ಉಪಸ್ಥಿತರಿದ್ದರು.