ಧಾರವಾಡ:ನ: 25: ಕರ್ನಾಟಕ ಸರ್ಕಾರವು ಕಳೆದ ಸೆಪ್ಟಂಬರ್ 15, 2024 ರಂದು ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾ ಪ್ರಭುತ್ವ ಜಾಗೃತಿ ಮೂಡಿಸಲು ಬೀದರ್‍ದಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಧಾರವಾಡ ಜಿಲ್ಲೆಯಿಂದ ಅತೀ ಹೆಚ್ಚು ಜನರು ಆನ್ ಲೈನ್ ಮೂಲಕ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರಿಂದ ಧಾರವಾಡ ಜಿಲ್ಲೆಗೆ ರಾಜ್ಯ ಸರ್ಕಾರವು ಪ್ರಥಮ ಸ್ಥಾನ ಪ್ರಶಸ್ತಿ ಪ್ರಕಟಿಸಿದೆ.
ಈ ಕುರಿತು ಅಭಿನಂದನಾ ಪತ್ರ ನೀಡಿರುವ ಸರ್ಕಾರವು, ರಾಜ್ಯ ಸರ್ಕಾರದಿಂದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಹಮ್ಮಿಕೊಳ್ಳುವುದರ ಮೂಲಕ, ಬೀದರ್‍ದಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಿಸಿ ಒಂದು ವಿಶಿಷ್ಟ ದಾಖಲೆ ನಿರ್ಮಿಸಲಾಗಿದೆ. ಇದು ವರ್ಡ್ ಬುಕ್ ಆಫ್ ರಿಕಾಡ್ರ್ಸ ಸೇರ್ಪಡೆಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
ಪ್ರಜಾ ಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಜಿಲ್ಲೆಗಳನ್ನು ಮಾನವ ಸರಪಳಿ ನಾವಿಣ್ಯತೆ, ಅತ್ಯಂತ ಉದ್ದದ ಮಾನವ ಸರಪಳಿ, ಅತಿ ಹೆಚ್ಚು ಗಿಡಗಳನ್ನು ನೆಡುವುದು, ಅತಿ ಹೆಚ್ಚು ಸ್ವಯಂ ಸೇವಾ ಸಂಘಗಳ ಭಾಗವಹಿಸುವಿಕೆ, ಅತಿ ಹೆಚ್ಚಾಗಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆ ಮತ್ತು ಅತಿ ಹೆಚ್ಚು ಆನ್ಲೈನ್ ರಿಜಿಸ್ಟ್ರೇಷನ್ ಮಾಡಿರುವುದು. ಈ 6 ವಿಭಾಗಗಳಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.
ಈ ಪೈಕಿ ಧಾರವಾಡ ಜಿಲ್ಲೆಯು ಅತಿ ಹೆಚ್ಚು ಆನ್ಲೈನ್ ರಿಜಿಸ್ಟ್ರೇಷನ್ ಮಾಡಿರುವ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಆದ್ದರಿಂದ ನವೆಂಬರ್ 26, 2024 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿರುವ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.