ಸಂಡೂರು:ನ:29:-ದಿನಾಂಕ:27.11.2024ರಂದು ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮವನ್ನು ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ದೆಹಲಿಯಿಂದ ಕೇಂದ್ರ ಸರ್ಕಾರವು ದೇಶವ್ಯಾಪಿ ಲೈವ್ ನಲ್ಲಿ ಚಾಲನೆ ನೀಡಿದರು.
ಸಂಡೂರು ತಾಲ್ಲೂಕು ರೀಚ್ ಸಂಸ್ಥೆ ವತಿಯಿಂದ ತಾಲೂಕಿನ ವಿವಿಧ ಶಾಲೆ ಮತ್ತು ಗ್ರಾಮಗಳಲ್ಲಿ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.
ಸುಶೀಲಾನಗರ ಮತ್ತು ಕೃಷ್ಣನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ನೇರಪ್ರಸಾರವನ್ನು ಪ್ರದರ್ಶಿಸುವ ಮೂಲಕ ಮಕ್ಕಳಿಗೆ ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿ ಸೇರಿ ಬಾಲ್ಯ ವಿವಾಹ ಮುಕ್ತ ಭಾರತ ಪ್ರತಿಜ್ಞೆ ವಿಧಿ ಕೈಗೊಂಡರು.
ರೀಚ್ ಸಂಸ್ಥೆ ಸಂಡೂರು ತಾಲೂಕು ಸಂಯೋಜಕರಾದ ಡಾ ಎರ್ರಿಸ್ವಾಮಿ ಹೆಚ್ ಮಾತನಾಡುತ್ತಾ, ಇಂದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೇಶದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ನಿರ್ಮಾಣವನ್ನು ಕೈಗೊಳ್ಳಲು 2030ಕ್ಕೆ ಇಡೀ ದೇಶವನ್ನು ಬಾಲ್ಯ ವಿವಾಹ ಮುಕ್ತ ಭಾರತವನ್ನಾಗಿಸಲು ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಅಭಿಯಾನದಲ್ಲಿ ರೀಚ್ ಸಂಸ್ಥೆಯು ಅತ್ಯಂತ ಕ್ರಿಯಾಶೀಲವಾಗಿ ಸಕ್ರಿಯವಾಗಿ ಸಂಡೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಜಾಗೃತಿಯನ್ನು ಮೂಡಿಸಲು ಪಣತೊಟ್ಟು ಕೆಲಸ ಮಾಡುತ್ತಿದೆ. ಬಾಲ್ಯವನ್ನು ಕಸಿದುಕೊಳ್ಳುವ ಈ ಸಾಮಾಜಿಕ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು, ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ಸಮುದಾಯಗಳ ಜೊತೆಗೆ ಕೆಲಸ ಮಾಡುವ ಸ್ವಯಂಸೇವಕರು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು. ರೀಚ್ ಸಂಸ್ಥೆಯು ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ಕೆಲಸವನ್ನು ಮಾಡುತ್ತಿದೆ. ಬಾಲ್ಯ ವಿವಾಹ ನಿಲ್ಲಿಸುವುದು ಮತ್ತು ಮಕ್ಕಳ ಗ್ರಾಮ ಸಭೆಗಳನ್ನು ಮಾಡುವುದು ನಿಮ್ಮ ಜವಾಬ್ದಾರಿ ಎಂದು ತಿಳಿದು ಸ್ವಯಂ ಸೇವಕರಾಗಿ ಮುಂದಾಗಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುಶೀಲಾನಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಮಂಜಣ್ಣ ಅವರು ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನವು ನಮ್ಮ ಬಳ್ಳಾರಿ ಜಿಲ್ಲೆಯು ಬಾಲ್ಯ ವಿವಾಹದಲ್ಲಿ ಮುಂದಿದ್ದು, ಸಂಡೂರು ತಾಲ್ಲೂಕು ಸಹ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮುಂದಿದೆ ಅದನ್ನ ತಡೆಗಟ್ಟುವ ಮೂಲಕ ಶೂನ್ಯಕ್ಕೆ ತಂದು ನಿಲ್ಲಿಸಬೇಕು ಎಂದಾದರೆ ಕೇವಲ ಸರ್ಕಾರ ಮತ್ತು ಅಧಿಕಾರಿಗಳು, ಸಂಘ ಸಂಸ್ಥೆಗಳು ಪ್ರಯತ್ನ ಮಾಡಿದರೆ ಸಾಲದು ಸಮುದಾಯ ಭಾಗವಹಿಸುವಿಕೆಯು ಮುಖ್ಯವಾದ ಪಾತ್ರ ವಹಿಸಬೇಕು. ಅದರ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು, ಶಾಲಾ ಹಂತದಲ್ಲಿನ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ನಿಷೇಧ ಕಾನೂನು ಹಾಗೂ ಬಾಲ್ಯ ವಿವಾಹ ತಡೆಗಟ್ಟುವುದಕ್ಕೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಅತೀ ಅವಶ್ಯಕವಿದೆ ಎಂದರು.
ಸಂಡೂರು ತಾಲ್ಲೂಕಿನ ಕೃಷ್ಣನಗರ, ಯಶವಂತನಗರ, ದೌಲತ್ ಪುರ, ಸುಶೀಲನಗರ ಮತ್ತು ಸಿದ್ದಾಪುರ ಗ್ರಾಮಗಳಲ್ಲಿ ಸಂಜೆ ದೀಪ ಬೆಳಗಿಸುವ ಮೂಲಕ ಗ್ರಾಮಗಳಲ್ಲಿನ ಮಹಿಳೆಯರು, ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಸೇರಿ ಏರಿಯಾಗಳಲ್ಲಿ ದೀಪ ಬೆಳಗಿಸಿ ಬಾಲ್ಯ ವಿವಾಹ ಮುಕ್ತ ಭಾರತಕ್ಕಾಗಿ ನಮ್ಮ ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವು ಸಂಪೂರ್ಣವಾಗಿ ಬಾಲ್ಯ ವಿವಾಹ ಮುಕ್ತ ಭಾರತವನ್ನಾಗಿಸುವ ಪ್ರತಿಜ್ಞೆ ವಿಧಿ ಕೈಗೊಳ್ಳುವ ಮೂಲಕ ಅಭಿಯಾನ ಸಂದೇಶವೇನು ಸಾರಿದರು.
ಈ ಸಂದರ್ಭದಲ್ಲಿ ರೀಚ್ ಸಂಸ್ಥೆಯ ಸ್ವಯಂ ಸೇವಕರಾದ ಪವಿತ್ರ, ಪುಷ್ಪವತಿ, ಸುಧಾ, ಮೌನೇಶ್, ಅಮೀದಾ ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ಸುದ್ಧಿ ಇವರಿಂದ ಡಾ.ಎರ್ರಿಸ್ವಾಮಿ ಹೆಚ್ ರೀಚ್ ಸಂಸ್ಥೆ ಸಂಡೂರು ತಾಲೂಕು ಸಂಯೋಜಕರು