Welcome to Hai Sandur   Click to listen highlighted text! Welcome to Hai Sandur
Saturday, January 4, 2025
HomeLatest Newsಸಂಪುಟ ಸರ್ಜರಿಗೆ ಸಿದ್ದು ರೆಡಿ

ಸಂಪುಟ ಸರ್ಜರಿಗೆ ಸಿದ್ದು ರೆಡಿ

ಕೆಲ ಕಾಲದಿಂದ ಮೂಡಾ ಸಂಕಟದಲ್ಲಿ ಮುಳುಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪುಟ ಸರ್ಜರಿಗೆ ಅಣಿಯಾಗುತ್ತಿದ್ದಾರೆ.
ಮೈಸೂರಿನ ಮೂಡಾ ಎಪಿಸೋಡು ಆರಂಭವಾದ ನಂತರ ಸಂಪುಟ ಸರ್ಜರಿಯ ಬಗ್ಗೆ ಆಸಕ್ತಿ ತೋರದ ಸಿದ್ದರಾಮಯ್ಯ ಅವರಿಗೀಗ ಎಲ್ಲ ಕಡೆಯಿಂದ ಸಮಾಧಾನದ ಸುದ್ದಿಗಳು ಬರುತ್ತಿವೆ.
ಅವರ ಆಪ್ತರು ಹೇಳುವ ಪ್ರಕಾರ,ಮೂಡಾ ಎಪಿಸೋಡಿನ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೆ ಹೇಳಿಕೊಳ್ಳುವಂತಹ ದಾಖಲೆಗಳೇನೂ ಸಿಕ್ಕಿಲ್ಲ.ಅರ್ಥಾತ್,ಈ ಪ್ರಕರಣದಲ್ಲಿ ಸಿದ್ಧರಾಮಯ್ಯ ಅವರ ಪಾತ್ರ ಇದೆ ಎನ್ನಲು ಬೇಕಾದ ಸಾಕ್ಷ್ಯಗಳೇನೂ ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿಲ್ಲ.
ಹೀಗಾಗಿ ಅದು ಮೂಡಾ ಎಪಿಸೋಡಿನಲ್ಲಿ ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಅಂತ ಶಂಕೆ ವ್ಯಕ್ತಪಡಿಸಬಹುದೇ ವಿನ: ಸಿದ್ದರಾಮಯ್ಯ ಅವರ ಪಾತ್ರ ಇದೆ ಅಂತ ಖಚಿತವಾಗಿ ಹೇಳಲು ಸಾಕ್ಷ್ಯಾಧಾರಗಳು ಸಿಗುತ್ತಿಲ್ಲ.
ಹೀಗಾಗಿ ತನಿಖೆಯ ದಿಕ್ಕನ್ನು ಬದಲಿಸಿರುವ ಅದು:ಸಿದ್ದರಾಮಯ್ಯ ಅವರ ಪತ್ನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಅವರ ಸಹೋದರನ ಮೂಲದ ಕಡೆ‌ ಕಣ್ಣು ಹಾಕಿದೆ.
ಒಂದು ವೇಳೆ ಅವರು ಭೂಮಿ ಖರೀದಿಸಲು ಸಿದ್ದರಾಮಯ್ಯ ಆಪ್ತರೇನಾದರೂ ಹಣ ನೀಡಿದ್ದರೆ,ಆ ಆಪ್ತರನ್ನೇ ಅಫ್ರೂವರ್ ಅನ್ನಾಗಿಸಲು ಯತ್ನಿಸುತ್ತಿದೆ.
ಹಾಗೆ ನೋಡಿದರೆ ಇದು ಡಿಟ್ಟೋ ಕೇಜ್ರಿವಾಲ್ ಪ್ರಕರಣದ ತನಿಖೆ ಮಾಡೆಲ್.ಆದರೆ ಇದರಲ್ಲಿ ಅದಕ್ಕೆ ಯಶಸ್ಸು ಸಿಗುವುದು ಅಸಾಧ್ಯ.
ಹೀಗಾಗಿ ಅದರ ತನಿಖೆಯ ಸ್ವರೂಪ ಹೇಗೇ ಇದ್ದರೂ ಅದು ಸಿದ್ದರಾಮಯ್ಯ ಅವರ ಖುರ್ಚಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂಬುದು ಸಿದ್ದು ಆಪ್ತರ ಮಾತು.
ಯಾವಾಗ ಈ ಕುರಿತು ನಂಬಿಕೆ ಬಂತೋ?ಇದಾದ ನಂತರ ಸಿದ್ಧರಾಮಯ್ಯ ಏಕಕಾಲಕ್ಕೆ ಹಲವು ವಿಷಯಗಳ ಕಡೆ ಗಮನ ಹರಿಸತೊಡಗಿದ್ದಾರೆ.
ಈ ವರ್ಷದ ಬಜೆಟ್ ಮೂಲಕ ಪಕ್ಷದ ಶಾಸಕರನ್ನು ಸಮಾಧಾನಪಡಿಸುವುದು ಅವರ ಮೊದಲ ಗುರಿ.ಹಾಗೆ ನೋಡಿದರೆ ಕಳೆದ ಎರಡು ಬಜೆಟ್ ಗಳಿಂದ ಕೈ ಪಾಳಯದ ಶಾಸಕರಿಗೆ ಸಮಾಧಾನವಾಗಿರಲಿಲ್ಲ.ಕಾರಣ?ಬಜೆಟ್ ಗೆ ಬರುವ ಹಣದ ಪೈಕಿ ಮೇಜರ್ ಷೇರು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿತ್ತು.
ಈ ಮಧ್ಯೆ ಹಿಂದಿದ್ದ ಬಿಜೆಪಿ ಸರ್ಕಾರ ಮಾಡಿಟ್ಟ ಕಮಿಟ್ ಮೆಂಟಿನ ಗಾತ್ರವೂ ದೊಡ್ಡದಿತ್ತು.ಹೀಗಾಗಿ ಇವುಗಳಿಗೆ ಹಣ ಹೊಂದಿಸಿಕೊಡುವುದರಲ್ಲೇ ಬಜೆಟ್ ಸುಸ್ತಾಗುತ್ತಿದ್ದುದರಿಂದ ಶಾಸಕರ ಕ್ಷೇತ್ರಗಳಿಗೆ ನಿರೀಕ್ಷಿತ ಅನುದಾನ ಲಭ್ಯವಾಗುತ್ತಿರಲಿಲ್ಲ.
ಅಷ್ಟೇ ಏಕೆ?ಸರ್ಕಾರದ ಮೂವತ್ತಕ್ಕೂ ಹೆಚ್ಚು ಇಲಾಖೆಗಳಿಗೆ ಕೊಡುತ್ತಿದ್ದ ಅನುದಾನವನ್ನೂ ಕಡಿತಗೊಳಿಸಲಾಗುತ್ತಿತ್ತು.ಆದ್ದರಿಂದಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಯಾವತ್ತೇ ನಡೆಯಲಿ.ಶಾಸಕರ ಸಿಟ್ಟು ಸಹಿಸಿಕೊಳ್ಳುವುದೇ ಒಂದು ಕೆಲಸವಾಗಿ ಹೋಗಿತ್ತು.
ಆದರೆ ಈ ವರ್ಷ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದು,ಏಕಕಾಲಕ್ಕೆ ಸರ್ಕಾರದ ಎಲ್ಲ ಇಲಾಖೆಗಳಿಗೆ ಅಗತ್ಯದ ಅನುದಾನ ನೀಡಿ ಮತ್ತು ಶಾಸಕರ ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡುವುದು ಸಿದ್ದರಾಮಯ್ಯ ಅವರ ಲೇಟೆಸ್ಟು ಲೆಕ್ಕಾಚಾರ.
ಹೀಗಾಗಿಯೇ ತಮ್ಮ ಸಂಪುಟದ ಮಂತ್ರಿಗಳಿಗೆ ಮೆಸೇಜು ಕೊಟ್ಟಿರುವ ಅವರು,ಜನವರಿ ಎರಡರಿಂದ ನಡೆಯುವ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಿಮ್ಮ ಇಲಾಖೆಯ ಹೊಸ ಯೋಜನೆಗಳ ವಿವರ ತನ್ನಿ ಅಂತ ಸೂಚಿಸಿದ್ದಾರೆ.
ಈ ಹಿಂದೆ ಬಜೆಟ್ ಪೂರ್ವಭಾವಿ ಸಭೆಗೆ ಬರುವ ಮಂತ್ರಿಗಳು ತಮ್ಮ ಹೊಸ ಕಾರ್ಯಕ್ರಮಗಳ ವಿವರ ನೀಡುವುದಿರಲಿ,ಇರುವ ಅನುದಾನವನ್ನೇ ಕಡಿತಗೊಳಿಸುವ ಮೆಸೇಜು ಬರುತ್ತಿತ್ತು.
ಆದರೆ ಈ ಸಲ ಇಲಾಖೆಗಳ ಬಜೆಟ್ ಕಡಿತ ಮಾಡುವ ಬದಲು ಹೊಸ ಕಾರ್ಯಕ್ರಮಗಳಿಗೂ ಹಣ ನೀಡುವ ಭರವಸೆ ಸಿಕ್ಕಿರುವುದರಿಂದ ಮಂತ್ರಿಗಳೂ ಖುಷಿಯಾಗಿದ್ದಾರೆ.ಅದೇ ರೀತಿ ಹಿಂದಿನ ಎರಡು ಬಜೆಟ್ ಗಳಿಂದ ಶಕ್ತಿ ದೊರೆಯದೆ ಸುಸ್ತಾಗಿದ್ದ ಶಾಸಕರೂ ಹೊಸ ನಿರೀಕ್ಷೆಯಲ್ಲಿದ್ದಾರೆ.
ಇದರರ್ಥ ಬೇರೇನೂ ಅಲ್ಲ.ಮಂಕಾಗಿದ್ದ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಕಾಣುತ್ತಿದೆ.ಮತ್ತು ಇಂತಹ ಉತ್ಸಾಹಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ನೆಮ್ಮದಿಯ ಹಳಿಗೆ ಮರಳಿದ್ದಾರೆ.

ಸಂಪುಟ ಸೇರುವವರು
ಯಾರು?

ಇನ್ನು ಸಚಿವ ಸಂಪುಟಕ್ಕೆ ಸರ್ಜರಿ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಂದು ಆದ್ಯತೆ.
ವಸ್ತುಸ್ಥಿತಿ ಎಂದರೆ ಸಚಿವ ಸಂಪುಟಕ್ಕೆ ಈ ಹಿಂದೆಯೇ ಸರ್ಜರಿ ನಡೆಯಬೇಕಿತ್ತು.ಆದರೆ ಮೂಡಾ ಎಪಿಸೋಡು ಶುರುವಾದ ನಂತರ ಕಾಣಿಸಿಕೊಂಡ ಗೊಂದಲ, ಕರಿಮೋಡವಾಗಿ ಆವರಿಸಿದ್ದರಿಂದ ಸರ್ಕಾರವೇ ಮಂಕಾಗಿತ್ತು.
ಹೀಗಾಗಿ ಆವರಿಸಿಕೊಂಡ ಕರಿಮೋಡ ತಿಳಿಯಾಗುವವರೆಗೆ ಸಂಪುಟ ಸರ್ಜರಿಯ ಬಗ್ಗೆ ಸಿದ್ಧರಾಮಯ್ಯ ಅವರಿರಲಿ,ಪಕ್ಷದ ವರಿಷ್ಟರೂ ನಿರಾಸಕ್ತಿ ತೋರಿಸುತ್ತಿದ್ದರು.
ಈ ಮಧ್ಯೆ ಹಲವು ಮಂತ್ರಿ ಪದವಿ ಆಕಾಂಕ್ಷಿಗಳು ದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಇಲ್ಲವೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಬಳಿ ತಮ್ಮ ಬೇಡಿಕೆ ಮಂಡಿಸುತ್ತಿದ್ದರಾದರೂ,ಮೊದಲು ಸರ್ಕಾರ ಸೇಫ್ ಆಗಲಿ.ಅಲ್ಲಿಯವರೆಗೆ ಇಂತಹ ಪ್ರಪೋಸಲ್ಲನ್ನೇ ತರಬೇಡಿ ಎಂಬ ಉತ್ತರ ಸಿಡಿಯುತ್ತಿತ್ತು.
ಹೀಗಾಗಿ ಈ ವಿಷಯದಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳು ಬಹಿರಂಗವಾಗಿ ಇರಲಿ,ಆಂತರಂಗಿಕವಾಗಿಯೂ ಮಾತನಾಡುವ ಉತ್ಸಾಹ ಕಳೆದುಕೊಂಡಿದ್ದರು.
ಆದರೆ ಈಗ ಸಿದ್ಧರಾಮಯ್ಯ ಮರಳಿ ಲಯಕ್ಕೆ ಬಂದಿರುವುದರಿಂದ ಕೈ ಪಾಳಯದಲ್ಲಿ ಮಂತ್ರಿಗಿರಿಗೆ ಮೆಲ್ಲನೆ ಲಾಬಿ ಸುರುವಾಗಿದೆ.
ಸಿದ್ದರಾಮಯ್ಯ ಅಪ್ತರ ಪ್ರಕಾರ:ಸಂಪುಟಕ್ಕೆ ಮೇಜರ್ ಸರ್ಜರಿ ಆಗದೇ ಇದ್ದರೂ ನಾಲ್ಕೈದು ಮಂದಿ ಮಂತ್ರಿಗಿರಿ ಕಳೆದುಕೊಂಡು ಐದಾರು ಮಂದಿ ಮಂತ್ರಿಗಳಾಗುವುದು ಬಹುತೇಕ ನಿಶ್ಚಿತ.
ಕುತೂಹಲದ ಸಂಗತಿ ಎಂದರೆ ಸರ್ಕಾರ ರಚನೆಯ ಸಂದರ್ಭದಲ್ಲಿ ತಮ್ಮ ಸಂಪುಟಕ್ಕೆ ಯಾರು ಬೇಕು?ಯಾರು ಬೇಡ?ಎಂಬ ವಿಷಯದಲ್ಲಿ ಸಿದ್ದರಾಮಯ್ಯ ಪರ್ಟಿಕ್ಯುಲರ್ ಆಗಿದ್ದರು.
ಆದರೆ ಬದಲಾದ ಕಾಲಘಟ್ಟದಲ್ಲಿ ಅವರ ಮನ:ಸ್ಥಿತಿಯೂ ಬದಲಾಗಿದೆಯಲ್ಲದೆ ಹಿಂದೆ ತಾವು ಯಾರನ್ನು ವಿರೋಧಿಸಿದ್ದರೋ?ಈಗ ಅವರ ಎಂಟ್ರಿ ವಿಷಯದಲ್ಲಿ ಸಿದ್ದರಾಮಯ್ಯ ಲಿಬರಲ್ ಆಗಿದ್ದಾರೆ.
ಇದರ ಪರಿಣಾಮವಾಗಿ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಜಾಸ್ತಿ.
ಇದೇ ರೀತಿ ಹಲವು ಕಾಲದಿಂದ ತಮ್ಮ ಕ್ಯಾಂಪಿನಿಂದ ಹೊರಗಿದ್ದ ತನ್ವೀರ್ ಸೇಠ್ ಅವರನ್ನು ಈ ಬಾರಿ ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ಧರಾಮಯ್ಯ ಬಯಸಿದ್ದಾರೆ.ಇದಕ್ಕೆ ತನ್ವೀರ್ ಸೇಠ್ ಬದಲಾಗಿರುವುದೂ ಮುಖ್ಯ ಕಾರಣ.
ಮೂಲಗಳ ಪ್ರಕಾರ,ಇತ್ತೀಚಿನವರೆಗೆ ಸಿದ್ದರಾಮಯ್ಯ ಅವರ ಕ್ಯಾಂಪಿನಿಂದ ಹೊರಗಿದ್ದ ತನ್ವೀರ್ ಸೇಠ್ ಈಗ ಸಿದ್ದು ಕ್ಯಾಂಪಿನ ಒಳಗೆ ಬಂದಿದ್ದಾರೆ.
ಇನ್ನು ಆಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರ ಪುತ್ರಿ ರೂಪಕಲಾ ಶಶಿಧರ್ ಸವರಿಗೆ ಮಂತ್ರಿಗಿರಿ ಕೊಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ ಸಿದ್ಧರಾಮಯ್ಯ ಅವರಿಗಿದೆ.
ಈ ಮಧ್ಯೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ‌ನಿಗಮದ ಹಗರಣವಾದ ನಂತರ ಮಂತ್ರಿಗಿರಿ ಕಳೆದುಕೊಂಡಿದ್ದ ಬಿ.ನಾಗೇಂದ್ರ ಅವರು ಮರಳಿ‌‌ ಮಂತ್ರಿಗಿರಿ ಪಡೆಯುವುದು ಗ್ಯಾರಂಟಿ.
ಉಳಿದಂತೆ ಮಂತ್ರಿಮಂಡಲದಿಂದ ಹೊರಬೀಳುವವರು ಯಾರು?ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಸಂಪುಟಕ್ಕೆ ಯಾರ್ಯಾರು ಸೇರಲಿದ್ದಾರೆ?ಎಂಬುದನ್ನು ಗಮನಿಸಿದರೆ ಹೊರಗೆ ಹೋಗುವವರು ಯಾರು?ಎಂಬ ಅಸ್ಪಷ್ಟ ಚಿತ್ರಣವಾದರೂ ಸಿಗುತ್ತದೆ.

ಕೆಪಿಸಿಸಿ ಪಟ್ಟಕ್ಕೆ
ಲಾಬಿ ಜೋರು

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿಗೆ ಮತ್ತಷ್ಟು ರಂಗು ಬಂದಿದ್ದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೆಸರುಗಳು ಎಂಟ್ರಿಯಾಗಿವೆ.
ಅಂದ ಹಾಗೆ ಜಿಲ್ಲಾ ಪಂಚಾಯತ್,ತಾಲ್ಲೂಕು ಪಂಚಾಯತ್ ಚುನಾವಣೆಗಳ ತನಕ ಹಾಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಮುಂದುವರೆಯಲಿದ್ದು,ತದನಂತರ ಈ ಹುದ್ದೆಗೆ ಬೇರೆಯವರು ಬರಲಿದ್ದಾರೆ.
ಹೀಗೆ ಬರುವವರು ತಾವೇ ಆಗಿರಬೇಕು ಅಂತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಟ್ರೈ ಕೊಡುತ್ತಿರುವುದು ರಹಸ್ಯವೇನಲ್ಲ.
ಆದರೆ ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರೇ ಬರಬೇಕು ಎಂಬ ಇಂಗಿತ ಸಿದ್ದರಾಮಯ್ಯ ಅವರಿಂದ ವ್ಯಕ್ತವಾಗಿರುವುದರಿಂದ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಈಶ್ವರ ಖಂಡ್ರೆ ಅವರ ಹೆಸರುಗಳು ಎಂಟ್ರಿಯಾಗಿವೆ.
ರಾಜ್ಯ ರಾಜಕಾರಣದ ಇವತ್ತಿನ ಸ್ಥಿತಿಯನ್ನು ಗಮನಿಸಿದರೆ ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ನೀಡುವುದು ಬೆಸ್ಟು.
ಯಾಕೆಂದರೆ ಇವತ್ತು ಕಾಂಗ್ರೆಸ್ಸಿನ ಎದುರು ನಿಂತಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಒಕ್ಕಲಿಗ-ಲಿಂಗಾಯತರೇ ಮೂಲಶಕ್ತಿಗಳು.
ಜಾತ್ಯಾತೀತ ಜನತಾದಳದ ಮುಂಚೂಣಿಯಲ್ಲಿ ಒಕ್ಕಲಿಗ ಸಮುದಾಯದ ಹೆಚ್.ಡಿ.ಕುಮಾರಸ್ವಾಮಿ,ಬಿಜೆಪಿಯ ಮುಂಚೂಣಿಯಲ್ಲಿ ಲಿಂಗಾಯತ ಸಮುದಾಯದ ಬಿ.ವೈ.ವಿಜಯೇಂದ್ತ ನಿಂತಿರುವುದು ಇದರ ಸಂಕೇತ.
ಇದಕ್ಕೆ ಪ್ರತಿಯಾಗಿ ನಮ್ಮಲ್ಲಿ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಪ್ರಭಾವಿಯಾಗಿದ್ದು,ಅದೇ ಕಾಲಕ್ಕೆ ಲಿಂಗಾಯತರು ಕೆಪಿಸಿಸಿ ಅಧ್ಯಕ್ಷರಾದರೆ ಕೌಂಟರ್ ಕೊಟ್ಟಂತಾಗುತ್ತದೆ ಎಂಬುದು ಸಿದ್ದು ಪ್ರಪೋಸಲ್ಲು.
ಪರಿಣಾಮ?ಮೊನ್ನೆ ಮೊನ್ನೆಯ ತನಕ ಕೆಪಿಸಿಸಿ ಪಟ್ಟದ ರೇಸಿನಲ್ಲಿ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಸುರೇಶ್ ಹೆಸರುಗಳಿದ್ದರೆ ಈಗ ಈಶ್ವರ ಖಂಡ್ರೆ ಮತ್ತು ಎಂ.ಬಿ.ಪಾಟೀಲರ ಹೆಸರುಗಳು ಕಾಣಿಸಿಕೊಂಡಿವೆ.
ಈ ಪೈಕಿ ಖಂಡ್ರೆ ಅವರು:ಕೊಡೋದಾದ್ರೆ ನಂಗೆ ಮಂತ್ರಿಗಿರಿಯ ಜತೆ ಅಧ್ಯಕ್ಷ ಹುದ್ದೆ ಕೊಡಿ ಎನ್ನುತ್ತಿರುವುದರಿಂದ ಎಂ.ಬಿ.ಪಾಟೀಲ್ ಹೆಸರು ರೇಸಿನಲ್ಲಿ ಮುಂದಕ್ಕೆ ಹೋಗಿದೆ.

ಮಂತ್ರಿ ರಾಜಣ್ಣ
ಲೆಟರ್ ಬಾಂಬು

ಇನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಎಐಸಿಸಿ ಅಧ್ಯಕ್ಷರಿಗೆ ಬರೆದಿದ್ದಾರೆನ್ನಲಾದ ಪತ್ರ ದೊಡ್ಡ ಸದ್ದು ಮಾಡುತ್ತಿದೆ.
ಮೂಲಗಳ ಪ್ರಕಾರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಕೆ.ಎನ್.ರಾಜಣ್ಣ ಅವರು ಪಕ್ಷ ಸಂಘಟನೆಯಲ್ಲಿ ವಿವಿಧ ಜಾತಿಗಳಿಗೆ ಹೇಗೆ ಆದ್ಯತೆ ನೀಡಬೇಕು ಅಂತ ವಿವರಿಸಿದ್ದಾರೆ.
ಒಂದು ಕ್ಷೇತ್ರದಲ್ಲಿ ಪಕ್ಷದ ವತಿಯಿಂದ ಯಾವ ಜಾತಿಯವರು ಶಾಸಕರಾಗಿದ್ದಾರೋ?ಅದೇ ಜಾತಿಯವರು ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಬಾರದು.ಶಾಸಕ ಮತ್ತು ಅಧ್ಯಕ್ಷ ಒಂದೇ ಜಾತಿಯವರಾಗಿದ್ದರೆ ಬೇರೆ ಸಮುದಾಯಗಳಿಗೆ ಕಾಂಗ್ರೆಸ್ ಬಗ್ಗೆ ನಂಬಿಕೆ‌ ಮೂಡುವುದು ಹೇಗೆ?ಮತ್ತು ನಾವು ಸಾಮಾಜಿಕ ನ್ಯಾಯದ ಪರ ಎನ್ನುವುದು ಹೇಗೆ? ಎಂಬುದು ರಾಜಣ್ಣ ಲೆಟರಿನ ಸಾರಾಂಶ.
ಹೀಗೆ ರಾಜಣ್ಣ ಅವರು ಬರೆದ ಪತ್ರ ಎಐಸಿಸಿ ಲೆವೆಲ್ಲಿನಲ್ಲಿ ಸಂಚಲನ ಮೂಡಿಸಿದೆಯಷ್ಟೇ ಅಲ್ಲ.ಈ ಬಗ್ಗೆ ಕರ್ನಾಟಕ ಘಟಕದಿಂದ ವಿವರ ತರಿಸಿಕೊಳ್ಳಲು ಖರ್ಗೆಯವರು ಬಯಸಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.

ಆರ್.ಟಿ.ವಿಠ್ಠಲಮೂರ್ತಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!