ಸಂಡೂರು ಸಹ ವಸತಿ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ(ವ್ಯಾಲಿಡಿಕ್ಟರಿ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಸ್ ಆರ್ ಎಸ್ ಡೈಮಂಡ್ ಜುಬಿಲಿ ಹಾಲ್ ನಲ್ಲಿ 10ನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ “ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು” ಎಂದು ಶಾಲೆಯ ಆಡಳಿತಾಧಿಕಾರಿಯೂ ಮತ್ತು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಹಿರ್ಜಿ ಅಜಯ್ ಘೋರ್ಪಡೆಯವರು ಹೇಳಿದರು.
ಅವರು ಮುಂದುವರಿದು ವಿದ್ಯಾರ್ಥಿಗಳಿಗೆ ನೀವು ನಿಮ್ಮ ಮುಂದಿನ ಭವಿಷ್ಯಕ್ಕೆ ಇಲ್ಲಿಂದ ಹಲವು ಕನಸುಗಳ ಜ್ಯೋತಿಯನ್ನು ಹೊತ್ತೊಯುತ್ತೀರಿ, ನೀವು ಇಲ್ಲಿ ಕಲಿತಂತಹ ನಡೆನುಡಿಗಳಾಗಲಿ, ನೀವು ನಿಮ್ಮ ಕಠಿಣ ಶ್ರಮದಿಂದ ಕಲಿತ ವಿದ್ಯೆಯಾಗಲಿ ನಿಮ್ಮ ಮುಂದಿನ ಜೀವನಕ್ಕೆ ಮಾರ್ಗದರ್ಶಕವಾಗಿರುತ್ತವೆ. ನೆನಪಿಡಿ, ಯಶಸ್ಸನ್ನು ನಿಮ್ಮ ಸಾಧನೆಗಳಿಂದ ಮಾತ್ರ ಅಳೆಯಲಾಗುವುದಿಲ್ಲ, ಬದಲಾಗಿ ನೀವು ಎತ್ತಿ ಹಿಡಿಯುವ ಮೌಲ್ಯಗಳು ಮತ್ತು ನೀವು ಇತರರ ಜೀವನದಲ್ಲಿ ಸೃಷ್ಟಿಸುವ ಪ್ರಭಾವದಿಂದಲೂ ಅಳೆಯಲಾಗುತ್ತದೆ ಎಂದು ಹೇಳಿದರು. ನಾವು ಕಳೆದ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಕಠಿಣ ಪರಿಶ್ರಮದಿಂದ ಶೈಕ್ಷಣಿಕ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಗಮನಾರ್ಹ ಯಶಸ್ಸನ್ನು ಕಂಡಿದ್ದೇವೆ ಎಂದು ಹೇಳಿದರು.
ಸಂಡೂರು ವಸತಿ ಶಾಲೆಯು ಕೇವಲ ಒಂದು ಸಂಸ್ಥೆಯಲ್ಲ; ಅದು ಒಂದು ಕುಟುಂಬ, ಪರಂಪರೆ, ಭರವಸೆ ಮತ್ತು ಆಕಾಂಕ್ಷೆಯ ಸಂಕೇತವಾಗಿದೆ ಎಂದು ತಿಳಿಸಿದರು.
ಅಲ್ಲದೇ ವಿದ್ಯಾರ್ಥಿಗಳಿಗೆ ಅವರ ಸಹೋದರ ಏಕಾಂಬರ್ ಘೋರ್ಪಡೆಯವರೊಂದಿಗೆ ನೆನಪಿನ ಕಾಣಿಕೆಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಏಕಾಂಬರ್ ಅಜಯ್ ಘೋರ್ಪಡೆ, ಶಿವಪುರ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಆಶಿಯಾ ಬಾನು, ಎಸ್ ಇ ಎಸ್ ಎಜ್ಯೂಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಜಗದೀಶ ಬಸಾಪುರ, ಎಸ್ ಆರ್ ಎಸ್ ಶಾಲೆಯ ಪ್ರಾಂಶುಪಾಲರಾದ ಅವಿನಾಶ್ ಕುಮಾರ್ ತ್ಯಾಗಿಯವರಲ್ಲದೇ ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳ ಪೋಷಕರು, ಸ್ಮಯೋರ್ ಸಂಸ್ಥೆಯ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳಾದ ಸಿಫಾ ಮತ್ತು ಇಬ್ರಾಹಿಂ ನಿರೂಪಣೆಯನ್ನು ನಡೆಸಿಕೊಟ್ಟರು, ವಂದನಾರ್ಪರ್ಣೆಯನ್ನು ಶಾಲೆಯ ಶಿಕ್ಷಕಿಯಾದ ಪ್ರತಿಭಾ ಜೀರಗಿಯವರು ನಡೆಸಿಕೊಟ್ಟರು.