ಸಂಡೂರು, ಮಾರ್ಚ್ 27:
ಸರಕಾರದ ಮಹತ್ವಾಕಾಂಕ್ಷಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯಡಿ ಏಪ್ರಿಲ್ 1 ರಿಂದ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಸಲುವಾಗಿ ದರೋಜಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಮಾಹಿತಿ ಸಭೆಯನ್ನು ಬುಧವಾರ ಆಯೋಜಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮೇಟಿಗಳನ್ನು ಸಭೆಗೆ ಆಹ್ವಾನಿಸಲಾಗಿದ್ದು, ಯೋಜನೆಯ ಉದ್ದೇಶ ಹಾಗೂ ಮೇಟಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ವಿವರವಾಗಿ ತಿಳಿಸಲಾಯಿತು.
ಸಭೆಯಲ್ಲಿ ಎನ್‌ಎಮ್‌ಎಮ್‌ಎಸ್ (NMMS) ಯ್ಯಾಪ್ ಮೂಲಕ ಹಾಜರಾತಿ ದಾಖಲು, ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಿಸುವುದು, ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳಿನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಕುರಿತು ಚರ್ಚೆ ನಡೆಯಿತು. ಅಲ್ಲದೆ, ಕೆಲಸದ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವ ಬಗ್ಗೆ ಮೇಟಿಗಳಿಗೆ ಮಾರ್ಗದರ್ಶನ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಪ್ರಭುವನಗೌಡ ಬಿ., ಕಾರ್ಯದರ್ಶಿ ಕಲ್ಲಪ್ಪ, ತಾಲ್ಲೂಕು ಐ.ಇ.ಸಿ ಸಂಯೋಜಕರಾದ ಯಂಕಪ್ಪ, ಪಂಚಾಯಿತಿ ಸದಸ್ಯರಾದ ಆಂಜಿನೆಯ್ಯ, ತಿಮ್ಮಪ್ಪ, ಕಿರನ್ ಕುಮಾರ, ಹಂಪಣ್ಣ, ಹೊನ್ನೂರಸ್ವಾಮಿ, ಗ್ರಾಮ ಪಂಚಾಯಿತಿ ಡಿಇಓಗಳಾದ ಶ್ರೀಮತಿ ರೇಣುಕಾ ಹೂಗಾರ, ರಾಘವೇಂದ್ರ, ಗ್ರಾಮ ಕಾಯಕ ಮಿತ್ರರಾದ ಶ್ರೀಮತಿ ಮಂಜುಳಾ, ಬಿಎಫ್ಟಿಯಾದ ನಾಗೇಶ್ ಸೇರಿದಂತೆ ಹಲವಾರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯು ಮೇಟಿಗಳು ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಪಾಲ್ಗೊಂಡು, ಗ್ರಾಮಸ್ಥರಿಗೆ ನಿರಂತರ ಉದ್ಯೋಗ ಒದಗಿಸುವಂತೆ ಪ್ರೇರಣೆ ನೀಡಿತು.