ಸಂಡೂರು, ಏಪ್ರಿಲ್ 7: ಸಂಡೂರು ತಾಲೂಕಿನ ನಾಗೇನಹಳ್ಳಿ ಹಾಗೂ ದೇವರಲಹಳ್ಳಿ ಉಪ ಜಲಾನಯನ ಯೋಜನೆಯ ವ್ಯಾಪ್ತಿಗೆ ಒಳಪಡುವ ಯರ್ರಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ. ತುಂಬರಗುದ್ದಿ, ಯರ್ರಯ್ಯನಹಳ್ಳಿ ಮತ್ತು ಸ್ವಾಮಿಹಳ್ಳಿ ಗ್ರಾಮಗಳಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ (ಬಳ್ಳಾರಿ) ಹಾಗೂ ಗ್ರಾಮ ಮಟ್ಟದ ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ಬೀದಿ ನಾಟಕ ಕಾರ್ಯಕ್ರಮವನ್ನು ಏರ್ಪಡಿಸಿ, ಸಮಗ್ರ ಪರಿಸರ ಸಂರಕ್ಷಣೆಯ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ, ಗಣಿಗಾರಿಕೆಯ ಪರಿಣಾಮದಿಂದ ಪರಿಸರ ಹಾಗೂ ಕೃಷಿ ಕ್ಷೇತ್ರಕ್ಕೆ ಉಂಟಾಗಿರುವ ಹಾನಿಗಳನ್ನು ತಡೆಯಲು ಜಲಾನಯನ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು. ಬೀದಿ ನಾಟಕದ ಮೂಲಕ ಈ ತಂತ್ರಗಳನ್ನು ಸರಳವಾಗಿ ಹಾಗೂ ಮನೋರಂಜನಾತ್ಮಕವಾಗಿ ತಲುಪಿಸಲು ಪ್ರಯತ್ನಿಸಲಾಯಿತು.
ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕುರಿತು ಜಾಗೃತಿ:
ಬೀದಿ ನಾಟಕ ಕಾರ್ಯಕ್ರಮದ ಕೇಂದ್ರ ವಿಷಯವಾಗಿದ್ದು, ಮಣ್ಣು ಹಾಗೂ ನೀರಿನ ಸಂರಕ್ಷಣೆ. ಇದರಿಂದ ದೊರೆಯುವ ಉಪಯೋಗಗಳು ಹಾಗೂ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಅಗತ್ಯತೆಯ ಕುರಿತು ಎಚ್ಚರಿಕೆ ನೀಡಲಾಯಿತು. ಮಣ್ಣಿನ ಸವಕಳಿಯಿಂದ ರೈತರಿಗೆ ಬೆಳೆ ಹಾನಿ ಉಂಟಾಗುತ್ತಿರುವುದನ್ನು ನಾಟಕದ ಮೂಲಕ ಚಿತ್ರಿಸಿ, ಈ ಸಮಸ್ಯೆಗೆ ಬದು ನಿರ್ಮಾಣ, ಕಂದಕದೊಂದಿಗೆ ಬದು, ಕೃಷಿ ಹೊಂಡ, ಗೋಕಟ್ಟೆ, ಚೆಕ್ ಡ್ಯಾಮ್, ಹಾಗೂ ರಬ್ಬರ್ ಚೆಕ್‌ಡ್ಯಾಂ ಮುಂತಾದ ಕ್ರಮಗಳ ಪರಿಣಾಮಕಾರಿ ಬಳಕೆ ಹೇಗೆ ನೆರವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲಾಯಿತು.
ಗ್ರಾಮೀಣ ಜನರ ಸಕ್ರಿಯ ಭಾಗವಹಿಸುವಿಕೆ:
ಈ ಕಾರ್ಯಕ್ರಮದಲ್ಲಿ ಸ್ಥಳೀಯ ರೈತರು, ಪ್ರಗತಿಪರ ಕೃಷಿಕರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಗ್ರಾಮಸ್ಥರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದರು. ನಾಟಕದ ಪರಿಣಾಮವಾಗಿ ಅವರಲ್ಲಿ ಜಲಾನಯನ ಹಾಗೂ ಮಣ್ಣಿನ ಸಂರಕ್ಷಣೆಯ ಬಗ್ಗೆ ಹೆಚ್ಚು ಅರಿವು ಮೂಡಿದದ್ದು ಗಮನಾರ್ಹ.
ಪದಾಧಿಕಾರಿಗಳ ಸಾನ್ನಿಧ್ಯ:
ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ ಅವರು ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಹಾಗೂ ಗ್ರಾಮಸ್ಥರ ಉತ್ಸಾಹವೇ ಕಾರಣವೆಂದು ಆಯೋಜಕರು ತಿಳಿಸಿದರು
ಈ ಬಗೆಯ ಜಾಗೃತಿ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಪರಿಸರದ ಕುರಿತು ಗಂಭೀರ ಚಿಂತನೆಗೆ ಕಾರಣವಾಗುತ್ತಿವೆ. ಜಲಾನಯನ ಅಭಿವೃದ್ಧಿ ಯೋಜನೆಯಂತಹ ಯೋಜನೆಗಳ ಫಲಿತಾಂಶಗಳನ್ನು ಜನರ ಮನಕ್ಕೆ ತಲುಪಿಸಲು ಈ ರೀತಿಯ ಸಾಂಸ್ಕೃತಿಕ ಪ್ರಕಾರಗಳು ಪರಿಣಾಮಕಾರಿಯಾಗಿವೆ ಎಂಬುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳಲ್ಲಿ ಈ ಬಗೆಯ ಕಾರ್ಯಕ್ರಮಗಳನ್ನು ಕೈಗೊಳ್ಳುವ ಯೋಜನೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.