Tuesday, January 13, 2026
HomeLatest Newsಎದೆಯ ಹಣತೆಯ ಅಂತರಂಗ

ಎದೆಯ ಹಣತೆಯ ಅಂತರಂಗ

ಲೇಖನ : ಜ್ಯೋತಿ.ಬಿ.ದೇವಣಗಾoವ್.
ಗೋಗಿ. ಶಹಾಪುರ


ಬಾನು ಮುಷ್ತಾಕ್ ಈಗ ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿರುವ ಮುನ್ನೆಲೆಯ ಹೆಸರು.ಅವರ ಸಾಹಿತ್ಯ ಪಯಣ ಪ್ರಾರಂಭಗೊಂಡು ಮೂರ್ನಾಲ್ಕು ದಶಕಗಳು ಕಳೆದಿದ್ದರು ಅವರ ಪ್ರಯತ್ನಗಳಿಗೆ ಸಾಹಿತಿಯೊಬ್ಬರಿಗೆ ಸಲ್ಲಬಹುದಾದ ಗರಿಷ್ಠ ಹೆಸರು ಕೀರ್ತಿ ಈಗ ಲಭಿಸಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಗ್ರಹಿಣಿ,ವಕೀಲೆ,ಹೋರಾಟಗಾರ್ತಿ,ಸಾಹಿತಿ ಹೀಗೆ ಅನೇಕ ಕವಲುಗಳಲ್ಲಿ ಸಾಗುತ್ತಾ ಒಂದರಿಂದ ಮತ್ತೊಂದಕ್ಕೆ ಸ್ಫೂರ್ತಿ,ಬಲ ಮತ್ತು ಬೆಳಕನ್ನು ಪಡೆದುಕೊಳ್ಳುತ್ತಾ ತಮಗೆ ದೊರೆತುದನ್ನು ಓದುಗರಿಗೆ ತಮ್ಮ ಬರಹಗಳ ಮೂಲಕ ಹಂಚಿಕೊಳ್ಳುತ್ತಾ ಸಾಗಿದವರು ಅವರು. ಅನೇಕ ಜನಪರ ಹೋರಾಟಗಳಲ್ಲಿ ಅವರ ಹೆಸರು ಕೇಳಿಬರುತ್ತಿದ್ದುದು ಅವರ ದಿಟ್ಟ ನಿಲುಗಳಿಂದ,ನಿರoತರವಾಗಿ ಚಾಲ್ತಿಯಲ್ಲಿದ್ದ ಹೋರಾಟ ಮನೋಭಾವನೆಗಳಿಂದ.ಹೋದ ವರ್ಷ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಜರುಗಿತು.ಅಲ್ಲಿನ ಸಮ್ಮೇಳನದ ಭಾಗವಾಗಿ ಯಾವುದೇ ಪ್ರಮುಖ ಸ್ಥಾನಗಳಲ್ಲಿ ಮುಸ್ಲಿಂ ಸಮುದಾಯದವರು ಆಯ್ಕೆ ಮಾಡಿಕೊಳ್ಳದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿತ್ತು.ಅಥವಾ ಅವರನ್ನು ಕಡೆಗಣಿಸಲಾಗಿತ್ತು.
ದೇಶದಲ್ಲಿ ಹೆಚ್ಚುತ್ತಲಿರುವ ಅಸಹಿಷ್ಣುತೆ ಮತ್ತು ಕೋಮುವಾದಕ್ಕೆ ಇಂಬುಕೊಡುವಂತೆ ಈ ಘಟನೆ ಕಂಡುಬಂದಿತು.ಇದನ್ನು ವಿರೋಧಿಸಿದ್ದ ಸಮಾನ ಮನಸ್ಕರ ಸಭೆ ಪರ್ಯಾಯ ಸಮ್ಮೇಳನ ನಡೆಸಿ ಅದಕ್ಕೆ ಅಧ್ಯಕ್ಷರಾಗಿ ಶ್ರೀಮತಿ.ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿತು.ಅವರ ನೇತೃತ್ವದಲ್ಲಿಯೇ ಸಮ್ಮೇಳನ ಯಶಸ್ವಿಯಾಗಿಯೂ ನೆರವೇರಿಸಲಾಗಿತ್ತು.ಆಗ ಕರ್ನಾಟಕದ ಬುದ್ಧಿಜೀವಿಗಳ ಚಿತ್ತ ಬಾನು ಮೇಡಂ ಅವರತ್ತ ಮತ್ತೊಮ್ಮೆ ಸೆಳೆದದ್ದು ಸುಳ್ಳಲ್ಲ.ದೇಶದಲ್ಲಿ ಅಥವಾ ರಾಜ್ಯದಲ್ಲಿ ನಡೆಯುವ ದೌರ್ಜನ್ಯ,ಕೋಮು ದಂಗೆಗಳು,ಗಲಭೆಗಳು,ಮುಂತಾದ ಅಹಿತಕರ ಘಟನೆಗಳ ಕುರಿತು ಸಮಚಿತ್ತದ ಸಮಯೋಚಿತ ಅಭಿಪ್ರಾಯ ಮತ್ತು ಸಂಭವನೀಯ ಸಾಧ್ಯತೆಗಳತ್ತ ಚಿತ್ತ ಸೆಳೆಯುತ್ತಿದ್ದವು ಅವರ ಮುಖಪುಟವೆಂಬ ಫೆಸ್ ಬುಕ್ ಗೋಡೆಯ ಬರಹಗಳು.2025 ರಲ್ಲಿ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆ ಶಾರ್ಟ್ ಲಿಸ್ಟ್ ಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದ ಅವರ ಪುಸ್ತಕ ಹಾರ್ಟ್ ಲ್ಯಾಂಪ್, ಶಾರ್ಟ್ ಸ್ಟೋರೀಸ್.ಕೊನೆಯ ಸುತ್ತಿನಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದು ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಬಾನು ಮುಷ್ತಾಕ್ ಅವರ ಸುಮಾರು ಆರು ಕಥಾ ಸಂಕಲನಗಳಿಂದ ಆಯ್ದುಕೊಂಡ ಹನ್ನೆರಡು ಕತೆಗಳ ಅನುವಾದ ಹಾರ್ಟ್ ಲ್ಯಾಂಪ್. ಕನ್ನಡದ ಸಾಹಿತ್ಯದ ಎದೆಯ ಹಣತೆಬೆಳಗಿಸಿತ್ತು.ಸಾವಿರಾರು ವರ್ಷಗಳಿಂದ ಕನ್ನಡದ ಸಾಹಿತ್ಯ ಹಣತೆ ಬೆಳಗಿಸಿಟ್ಟ ಮಹನೀಯರ ಶ್ರಮಕ್ಕೆ ತಮ್ಮದೂ ಬಲ ಪೇರಿಸಿದರು ಬಾನು ಮುಷ್ತಾಕ್.ದೇಶ ವಿದೇಶಗಳಲ್ಲಿ ಹಾರ್ಟ್ ಲ್ಯಾಂಪ್ ಕುರಿತು ಸಂವಾದಗಳಲ್ಲಿ ಭಾಗವಹಿಸುತ್ತಾ ತಮ್ಮ ಬದುಕು,ಬರಹ ತಮ್ಮನ್ನು ಪ್ರಭಾವಿಸಿದ ಸಂಗತಿಗಳು,ತಮ್ಮ ಬದುಕಿನಲ್ಲಿ ಕಂಡ ಅನುಭವಗಳನ್ನು ಪ್ರಪಂಚದ ಎದುರಲ್ಲಿ ಹಂಚಿಕೊಳ್ಳುವ ಸುವರ್ಣ ಘಳಿಗೆ ಅವರಿಗೆ ಬಂದೊದಗಿದೆ. ಬೂಕರ್ ಪ್ರಶಸ್ತಿ ಸ್ವೀಕರಿಸಿದ ನಂತರ ಅವರಾಡಿದ ಮಾತುಗಳು ತುಂಬಾ ಮೌಲಿಕವಾಗಿದ್ದವು.ಅನುವಾದಕಿ ದೀಪಾ ಭಾಸ್ತಿ ಮತ್ತು ಮೂಲ ಲೇಖಕಿ ಬಾನು ಮುಷ್ತಾಕ್ ಎರಡು ಭಿನ್ನ ಧರ್ಮಗಳ ವಿಭಿನ್ನ ಧಾರ್ಮಿಕ ಆಚರಣೆಗಳಲ್ಲಿನ ಎರಡು ಧ್ರುವಗಳ ಸಂಗಮದಂತೆ ಕಂಡರೂ ಹೆಣ್ಣು ಎನ್ನುವ ಸಮಾನ ಸಂವೇದನೆ ಅವರನ್ನು ಹತ್ತಿರಕ್ಕೆ ಎಳೆದು ತಂದಿತೆ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಬ್ಬರ ಜೋಡಿ, ಪ್ರಪಂಚವನ್ನು ಕನ್ನಡ ಸಾಹಿತ್ಯದತ್ತ ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ.ಬೂಕರ್ ಸ್ವೀಕರಿಸಿದ ನಂತರ ಅವರು ಹಾಸನದ ನಾಗರಿಕರ ಸನ್ಮಾನ ಸ್ವೀಕರಿಸಿ ಬೂಕರ್ ಪ್ರಶಸ್ತಿ,ಅದರ ಆಯ್ಕೆ ಕ್ಷಣಗಳು,ಅನಂತರದ ಸಂಭ್ರಮದ ಕುರಿತು ಸಭಿಕರಿಗೆ ವಿವರಿಸಿದ್ದು ತುಂಬಾ ಅರ್ಥಪೂರ್ಣವಾಗಿತ್ತು.ಆಯ್ಕೆ ಪ್ರಕ್ರಿಯೆ ಮತ್ತು ಅದರ ಅನoತರದ ಪ್ರಕ್ರಿಯೆಗಳನ್ನು ಸಹಜವಾಗಿ ಸರಳವಾಗಿ ಹಂಚಿಕೊಂಡದ್ದು ಅವರ ಸರಳತೆಗೆ ಮತ್ತೊಂದು ಉದಾಹರಣೆ. ಮಕ್ಕಳ ಮುಗ್ಧ ನಗು,ಕನ್ನಡ ಭಾಷೆಗೆ ಅದು ದಕ್ಕಿದೆ ಎನ್ನುವ ಅಭಿಮಾನ ಅವರ ನಡೆ ನುಡಿಗಳಲ್ಲಿ ಪ್ರತಿಫಲಿಸುತ್ತಿದ್ದವು.
ಅವರ ಬರಹಗಳ ಕುರಿತು ಒಳಹೊಕ್ಕು ಕತಾಂತರಂಗ ಅರಿಯಲು ಸಂಶೋಧನಾತ್ಮಕ ನೆಲೆಯ ಓದು ತುಂಬಾ ಮುಖ್ಯ ಈ ಮೂಲಕ ಅವರ ಬರಹಗಳ ಆಳ ಶೋಧಿಸಲು ಸಾದ್ಯವಾಯಿತು.ಅವರ ಬರಹಗಳು ತುಂಬಾ ಸರಳ ಪದಗಳಲ್ಲಿ ಮೂಡಿಬಂದರು ಅವುಗಳಲ್ಲಿನ ಆಳವಾದ ಚಿಂತನೆಗಳು,ಸಂವೇದನೆಗಳು ಗಾಢ ಪ್ರಭಾವದ ಛಾಪು ಒತ್ತುತ್ತವೆ.ಅವುಗಳಲ್ಲಿನ ತಾತ್ವಿಕತೆ ಓದುಗರನ್ನು ಬಹುಕಾಲ ಕಾಡುವಂತಹವಾಗಿವೆ.ಅವರ ಬರಹಗಳನ್ನು ಆಳವಾಗಿ ಸ್ಪರ್ಶಿಸಲು ವಿವೇಚನಾಯುಕ್ತ ಓದು ಅವಶ್ಯಕವಾಗಿ ತೋರುತ್ತದೆ.
ಬಳ್ಳಾರಿಯಲ್ಲಿ ಜರುಗಲಿರುವ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಸಾರಥ್ಯ ಬಾನು ಮುಷ್ತಾಕ್ ಅವರಿಗೆ ನೀಡಲಾಗಿದೆ.ಬಹು ಜನರ ಬಹುದಿನದ ಬೇಡಿಕೆಯ ಮನ್ನಣೆ ಎಂಬಂತೆ ಮೊದಲಬಾರಿಗೆ ಮಹಿಳೆಯೋರ್ವರ ಸಾರಥ್ಯದಲ್ಲಿ ಕನ್ನಡಮ್ಮನ ಉತ್ಸವ ಜರುಗಲಿದೆ ಹಲವು ಹೊಸತುಗಳಿಗೆ ಸಾಕ್ಷಿಯಾಗಲಿರುವ ಈ ಸಮ್ಮೇಳನ ಬಾನು ಮುಷ್ತಾಕ್ ಅವರ ಮುಂದಾಳತ್ವದಲ್ಲಿ ನಡೆದು ಸಮ್ಮೇಳನ ತನ್ನ ಮೂಲ ಅರ್ಥವನ್ನು ಮತ್ತೆ ಪಡೆದುಕೊಳ್ಳಲಿ ಎನ್ನುವ ಆಶಯದ ನಿರೀಕ್ಷೆಯಲ್ಲಿದೆ ಕನ್ನಡ ಸಾರಸ್ವತ ಲೋಕ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments