ವಿಜಯನಗರ: ಜಿಲ್ಲಾ ಪಂಚಾಯತಿ ಹಾಗೂ ತಾಲೂಕು/ಗ್ರಾಮ ಪಂಚಾಯಿತಿಗಳ ಸಂಯೋಜನೆಯಲ್ಲಿ, ವಿಜಯನಗರ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ “ಸ್ವಚ್ಛತಾ ಹೀ ಸೇವಾ ಪಾಕ್ಷಿಕ್ – 2025” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯದ ನಿರ್ದೇಶನದಂತೆ, ಈ ಅಭಿಯಾನದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂಪೂರ್ಣ ನೈರ್ಮಲ್ಯ ಸಾಧನೆಗೆ ಪ್ರಾಶಸ್ತ್ಯ ನೀಡಲಾಗುವುದು. ಸಾರ್ವಜನಿಕರ ನೇರ ಭಾಗವಹಿಸುವಿಕೆಯೊಂದಿಗೆ ಆರೋಗ್ಯಕರ ಪರಿಸರ ನಿರ್ಮಾಣ ಮುಖ್ಯ ಗುರಿಯಾಗಿರಲಿದೆ.
ಅಭಿಯಾನಕ್ಕೆ ಅಧಿಕೃತ ಚಾಲನೆ:
ಜಿಲ್ಲಾ ಮಟ್ಟದಲ್ಲಿ ಸೆಪ್ಟೆಂಬರ್ 17ರಂದು ವಿಶೇಷ ಕಾರ್ಯಕ್ರಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ರಚಿಸಿ, ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮೇಲ್ವಿಚಾರಣೆ ನಡೆಸಲಾಗುವುದು.
ಪ್ರಮುಖ ಚಟುವಟಿಕೆಗಳು
ಅಭಿಯಾನದ ಭಾಗವಾಗಿ:
■ಗ್ರಾಮೀಣ ಪ್ರದೇಶದ ಬೃಹತ್ ಕಸದ ರಾಶಿ ತೆರವುಗೊಳಿಸುವುದು.
■ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಶುಚಿತ್ವ ಶ್ರಮದಾನ.
■ಸ್ವಚ್ಛತಾ ಕಾರ್ಯಕರ್ತರ ಆರೋಗ್ಯ ಶಿಬಿರಗಳು.
■ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಶಿಬಿರಗಳು.
■ಪರಿಸರ ಸ್ನೇಹಿ, ತ್ಯಾಜ್ಯ ರಹಿತ ಹಬ್ಬಗಳ ಆಚರಣೆಗೆ ಪ್ರೋತ್ಸಾಹ.
■ತ್ಯಾಜ್ಯದಿಂದ ಕಲಾಕೃತಿಗಳ ರಚನೆ, ಸ್ವಚ್ಛ ಬೀದಿ – ಸ್ವಚ್ಛ ಆಹಾರ ಕುರಿತು ಜಾಗೃತಿ.
ಅಭಿಯಾನದ ಮುಖ್ಯ ಆಕರ್ಷಣೆಯಾಗಿ “ಒಂದು ದಿನ – ಒಂದು ಘಂಟೆ – ಎಲ್ಲರೂ ಒಟ್ಟಿಗೆ” (ಎಕ್ ದಿನ್, ಎಕ್ ಘಂಟಾ, ಎಕ್ ಸಾಥ್) ಘೋಷವಾಕ್ಯದಡಿ ಸೆಪ್ಟೆಂಬರ್ 2025ರಲ್ಲಿ ಜಿಲ್ಲೆಯಾದ್ಯಂತ ಸಾಮೂಹಿಕ ಶ್ರಮದಾನ ನಡೆಯಲಿದೆ.
ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಕರೆ:
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ನೋಂಗ್ಲಯಾ ಮೊಹಮದ್ ಅಲಿ ಅಕ್ರಮ್, ಐಎಎಸ್ ಮಾತನಾಡಿ, “ಸರ್ಕಾರದ ನಿರ್ದೇಶನದಂತೆ, ವಿಜಯನಗರ ಜಿಲ್ಲೆಯಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ್ 2025 ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲಾ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಶ್ರೀ ಕೆ. ತಿಮ್ಮಪ್ಪ, ಸಹಾಯಕ ಯೋಜನಾ ಅಧಿಕಾರಿ ಶ್ರೀ ಉಮೇಶ್ ಎಂ., ಸ್ವಚ್ಛ ಭಾರತ್ ಮಿಷನ್ (IEC ಸಮಾಲೋಚಕ) ಹನುಮಂತಪ್ಪ, ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜೊತೆಗೆ ಎಲ್ಲಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು
