ಸಂಡೂರು, ಸೆಪ್ಟೆಂಬರ್ 16:
ಸಂಡೂರು ತಾಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದರ್ತಿ ಅಭಾ – ಜನಜಾತೀಯ ಗ್ರಾಮ ಉತ್ಕರ್ಷ ಕಾರ್ಯಕ್ರಮದ ಅಂಗವಾಗಿ ಅಧಿಕರ್ಮಯೋಗಿ ಅಭಿಯಾನ ಕಾರ್ಯಕ್ರಮವು ಪಟ್ಟಣದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಜರುಗಿತು. ಎರಡು ದಿನಗಳ ಕಾಲ ಗ್ರಾಮಮಟ್ಟದ ಮಾಸ್ಟರ್ ತರಬೇತಿದಾರರಿಗೆ (VMTs) ಒರಿಯೆಂಟೇಶನ್ ಹಾಗೂ “ನಮ್ಮ ಗ್ರಾಮ – ಸಮೃದ್ಧಿಯ ಕನಸು” ಗ್ರಾಮ ಕಾರ್ಯ ಪುಸ್ತಕದ ಕುರಿತು ಚರ್ಚೆ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಮುರಾರಿಪುರ ಗ್ರಾಮದ ಮಹಿಳೆಯರು ಬುಡಕಟ್ಟು ಸಮುದಾಯದ ಜನಪದ ಗೀತೆ ಹಾಡಿ, ಗಿಡಕ್ಕೆ ನೀರು ಹಾಕುವ ಮೂಲಕ ಭಿನ್ನ ರೀತಿಯ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದ ಉದ್ದೇಶ:
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಶಿಷ್ಟ ವರ್ಗಗಳ ಇಲಾಖೆಯ ರಂಗನಾಥ್ ಅವರು, ಬುಡಕಟ್ಟು ಹೋರಾಟಗಾರ ಬಿರ್ಸಾ ಮುಂಡ ಅವರ 150ನೇ ಜನ್ಮದಿನದ ಅಂಗವಾಗಿ ಈ ಅಭಿಯಾನ ರೂಪುಗೊಂಡಿದೆ ಎಂದು ತಿಳಿಸಿದರು. 2024 ರಿಂದ 2028ರವರೆಗೆ 5 ವರ್ಷಗಳ ಅವಧಿಯಲ್ಲಿ ಈ ಯೋಜನೆ ಜಾರಿಯಾಗಲಿದ್ದು, 7 ಇಲಾಖೆಗಳ ಅಡಿಯಲ್ಲಿ 7 ಯೋಜನೆಗಳನ್ನು ಆಯ್ಕೆಯಾದ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ಗ್ರಾಮಮಟ್ಟದ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಶಿಕ್ಷಕರು ಹಳ್ಳಿಗಳ ಕುಂದುಕೊರತೆಗಳನ್ನು ಸರ್ವೇ ಮಾಡಿ – ಕುಡಿಯುವ ನೀರು, ರಸ್ತೆ, ಬೀಳುವ ಮನೆಗಳು ಸೇರಿದಂತೆ ಮೂಲಭೂತ ಸಮಸ್ಯೆಗಳ ಮಾಹಿತಿಯನ್ನು ನೀಡಿದರೆ ಸಂಬಂಧಪಟ್ಟ ಇಲಾಖೆಗಳ ಮೂಲಕ ತಕ್ಷಣ ಪರಿಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
“ಸಾವಿರಾರು ಕೋಟಿ ಅನುದಾನದ ಅಭಿಯಾನ” – ತಾಪಂ ಇಓ:
ತಾಲೂಕು ಪಂಚಾಯಿತಿ ಇಓ ಮಡಗಿನ ಬಸಪ್ಪ ಅವರು ಉದ್ಘಾಟನಾ ನುಡಿಯಲ್ಲಿ, “ಬಿರ್ಸಾ ಮುಂಡ ಅವರ ಸ್ಮರಣಾರ್ಥ ದರ್ತಿ ಅಭಾ ಅಭಿಯಾನವನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ. ಸಾವಿರಾರು ಕೋಟಿ ಅನುದಾನವನ್ನು ಈ ಯೋಜನೆಗೆ ಮೀಸಲಿಡಲಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು. ಯಾವುದೇ ಕುಟುಂಬ ಯೋಜನೆಗಳಿಂದ ವಂಚಿತರಾಗದಂತೆ ಎಚ್ಚರಿಕೆಯಿಂದ ಕ್ರಿಯಾ ಯೋಜನೆ ರೂಪಿಸಬೇಕು” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ, ಈ ಹಿಂದೆ ಸರ್ವೆಯಲ್ಲಿ ಬಿಟ್ಟುಹೋಗಿರುವ ದೇವದಾಸಿ ಕುಟುಂಬಗಳನ್ನು ಮರುಸರ್ವೇಯಲ್ಲಿ ಸೇರಿಸಲು ಅವಕಾಶವಿದೆ ಎಂದು ಘೋಷಣೆ ಮಾಡುತ್ತಾ, ದೇವದಾಸಿ ಮರುಸರ್ವೇ ಕುರಿತು ಪೋಸ್ಟರ್ ಅನ್ನು ಪ್ರಮೀಳಾ ಅವರೊಂದಿಗೆ ಬಿಡುಗಡೆ ಮಾಡಿದರು.
ಸಮುದಾಯದ ಒಗ್ಗಟ್ಟಿಗೆ ಒತ್ತಾಯ:
ಸಿಡಿಪಿಓ ನಾಗರಾಜ್ ಅವರು, “ಗ್ರಾಮದ ಸಮುದಾಯವನ್ನು ಒಂದೆಡೆ ಸೇರಿಸಿ ಚರ್ಚಿಸಿದಾಗ ನಿಜವಾದ ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಇದರಿಂದ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ತಲುಪುವಂತೆ ಮಾಡಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಜಿಲ್ಲಾಮಟ್ಟದ ಸ್ಪಷ್ಟನೆ:
ಜಿಲ್ಲಾ ನೋಡ್ಲ್ ಅಧಿಕಾರಿ ವೇದಾವತಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಯುಕ್ತವಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, 2008ರ ಜನಗಣತಿ ಪ್ರಕಾರ ಸಂಡೂರಿನ 20 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. “ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲಾ ಇಲಾಖೆಗಳ ಶ್ರಮ ಅತ್ಯಗತ್ಯ” ಎಂದು ಅವರು ಒತ್ತಾಯಿಸಿದರು.
ತಹಶೀಲ್ದಾರರ ವಿಶ್ವಾಸ:
ತಹಶೀಲ್ದಾರ್ ಅನಿಲ್ ಕುಮಾರ್ ಅವರು, “10 ಕೋಟಿ 56 ಲಕ್ಷ ಅನುದಾನದಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಇದರ ವೈಶಿಷ್ಟ್ಯವೆಂದರೆ, ಸಮುದಾಯದವರು ಇಲಾಖೆಗಳ ಹತ್ತಿರ ಬರಬೇಕಾಗಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಅವರ ಮನೆ ಬಾಗಿಲಿಗೇ ತೆರಳಿ ಸೌಲಭ್ಯ ಒದಗಿಸುತ್ತಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರು;
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್, ತಾಪಂ ಇಓ ಮಡಗಿನ ಬಸಪ್ಪ, ಸಿಡಿಪಿಓ ನಾಗರಾಜ್, ಶಿಕ್ಷಣ ಇಲಾಖೆಯ ಸಮನ್ವಯಧಿಕಾರಿ ಶರಣಪ್ಪ, ತೋಟಗಾರಿಕೆ ಇಲಾಖೆಯ ಉದಯ್, ಅರಣ್ಯ ಇಲಾಖೆಯ ಶಿವಕುಮಾರ್, ಪರಿಶಿಷ್ಟ ವರ್ಗಗಳ ಇಲಾಖೆಯ ರಂಗನಾಥ್, ಕಾರ್ಮಿಕ ಇಲಾಖೆಯ ಮಂಜುನಾಥ್, ಮೀನುಗಾರಿಕೆ ಇಲಾಖೆಯ ಮಂಜುನಾಥ್ ಹಾಗೂ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಬಳ್ಳಾರಿ ಡಿಡಿಪಿಐ ಕಚೇರಿಯ ವೇದಾವತಿ ಹಾಜರಿದ್ದರು.
