ಬಳ್ಳಾರಿ,ಸೆ.16: ಪ್ರತಿಯೊಬ್ಬರು ಹಿರಿಯ ನಾಗರಿಕರನ್ನು ಗೌರವಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಅವರನ್ನು ತಿರಸ್ಕಾರ ಮಾಡುತ್ತಿರುವುದು ಸರಿಯಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ರಾಜೇಶ್ ಎನ್.ಹೊಸಮನೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವಜನ ಸೇವಾ ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಶ್ರಯದಲ್ಲಿ ನಗರದ ಕಂಟೋನ್ ಮೆಂಟ್ ನ ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಕ್ರೀಡಾಂಗಣ(ಬಿ ಎಂ ಸಿ ಆರ್ ಸಿ) ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ 2025 ರ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಜೀವನದ ಮೂರು ಹಂತಗಳಾದ ಬಾಲ್ಯ, ಯೌವ್ವನ, ಮುಪ್ಪು ದಾಟಬೇಕು. ಮಕ್ಕಳಿಗೆ ತಪ್ಪು ಸರಿ ಕುರಿತು ಅರಿವಿರುವುದಿಲ್ಲ. ಇದೇ ರೀತಿ ಹಿರಿಯ ನಾಗರಿಕರು ವಯಸ್ಸಾದಂತೆ ಮಕ್ಕಳಂತಾಗುತ್ತಾರೆ ಎಂದರು.
ಹಿರಿಯ ನಾಗರಿಕರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಅವರನ್ನು ತಿರಸ್ಕಾರ ಮನೋಭಾವದಿಂದ ಕಾಣುತ್ತಿರುವುದು ವಿಪರ್ಯಾಸ. ಹಿರಿಯರ ಮಾತಿಗೆ ಉತ್ತೇಜನ ನೀಡಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ವಯಸ್ಸಾಗುತ್ತಿದ್ದಂತೆ ಅರಳು ಮರಳು ಎನ್ನುವ ಮಾತಿದೆ. ಆದರೆ ಅವರಲ್ಲಿನ ಕಲೆ ಪ್ರತಿಭೆ ನೋಡಿದರೆ ಆಶ್ಚರ್ಯವಾಗುತ್ತದೆ. ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಇಳಿವಯಸ್ಸಿನಲ್ಲಿ ಜೀವಗಳಿಗೆ ಉಲ್ಲಾಸ ತುಂಬಬೇಕಿದೆ. ವೃತ್ತಿ ನಿವೃತ್ತಿಯೊಂದಿಗೆ ಪ್ರವೃತ್ತಿ ನಿವೃತ್ತಿಯಾಗದಂತೆ ನೋಡಿಕೊಳ್ಳಬೇಕಿದೆ. ನಮ್ಮಲ್ಲಿ ಪ್ರತಿಭೆ ಇದೆ ಕಲೆ ಇದೆ ಅದನ್ನು ಗುರುತಿಸುವ ಕೆಲಸವಾಗಬೇಕಿದೆ ಎನ್ನುವ ಸಂದೇಶವನ್ನು ಈ ಕ್ರೀಡಾಕೂಟದಲ್ಲಿ ಹಿರಿಯರು ಸಾರಬೇಕು ಎಂದು ಹಿರಿಯ ನಾಗರಿಕರಿಗೆ ಹೇಳಿದರು.
ಯುವಕರನ್ನು ನಾಚಿಸುವಂತೆ ತಮ್ಮ ವಯಸ್ಸು ಮೀರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ್ ಅವರು ಮಾತನಾಡಿ, ಹಿರಿಯ ನಾಗರಿಕರ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಜಿಲ್ಲಾಡಳಿತ ನಮ್ಮನ್ನೆಲ್ಲಾ ವರ್ಷಕ್ಕೊಮ್ಮೆ ಬೆಸೆಯುತ್ತದೆ. ವರ್ಷಪೂರ್ತಿ ನಡೆದ ದುಃಖ ದುಮ್ಮಾನಗಳನ್ನು ನಾವು ಹಂಚಿಕೊಳ್ಳುತ್ತೇವೆ. ಕ್ರೀಡೆಗಳಲ್ಲಿ ಗೆಲುವು ಸೋಲು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಆರೋಗ್ಯವಾಗಿರಬೇಕು ಎಂದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಉತ್ಸಾಹದಿಂದ ಇರಬೇಕು ಎಂದರು.
ಹಿರಿಯ ನಾಗರಿಕರು ದೈಹಿಕವಾಗಿ ಕೆಲಸ ಮಾಡದೆ ಮಾನಸಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಆಚಾರ ವಿಚಾರ ಸಾಧನೆಗಳು ಈಗಿನ ಯುವ ಪೀಳಿಗೆಗಳಿಗೆ ಸ್ಪೂರ್ತಿಯಾಗಿದ್ದು, ಹಿರಿಯರನ್ನು ಕಡೆಗಣಿಸದೆ ಗೌರವದಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಂದಾಜು 200 ಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಮೂಲಕ ತಮ್ಮ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ಸಾಹವನ್ನು ತೋರಿಸಿದರು.
ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಮ್ಯೂಸಿಕಲ್ ಚೇರ್, ಬಿರುಸಿನ ನಡೆಗೆ ಹಾಗೂ ಬಕೆಟ್ ನಲ್ಲಿ ಬಾಲ್ ಎಸೆಯುವ ಕ್ರೀಡೆಗಳನ್ನು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಾದ ಗಾಯನ ಸ್ಪರ್ಧೆ ಹಾಗೂ ಏಕ ಪಾತ್ರ ಅಭಿನಯವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ.ಹೆಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸವಿತಾ, ಸಂಡೂರು ಶಿಶು ಅಭಿವೃದ್ಧಿ ಅಧಿಕಾರಿ ನಾಗರಾಜ, ಅಂತರಾಷ್ಟಿçÃಯ ಕ್ರೀಡಾಪಟು ಸತ್ಯನಾರಾಯಣ, ಚೆಂಗಾರೆಡ್ಡಿ ವೃದ್ಧಾಶ್ರಮದ ಆಡಳಿತಾಧಿಕಾರಿ ಗುರುಮೂರ್ತಿ, ಸಂಗನಕಲ್ಲು ಆದರ್ಶ ವೃದ್ಧಾಶ್ರಮದ ಅಧ್ಯಕ್ಷ ವೆಂಕೋಬಪ್ಪ, ಸಿರುಗುಪ್ಪ ಭೀಮಾ ವಿದ್ಯಾ ಸಂಸ್ಥೆಯ ಮಹೇಶ್ ಕುಮಾರ್, ಬಳ್ಳಾರಿ ಅನುಗ್ರಹ ವಿದ್ಯಾಸಂಸ್ಥೆಯ ಸಿಸ್ಟರ್ ಪ್ರಜ್ಞ ಸೇರಿದಂತೆ ದೈಹಿಕ ಶಿಕ್ಷಕರು, ಹಿರಿಯ ನಾಗರಿಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
