ಬೆಂಗಳೂರು, ಅಕ್ಟೋಬರ್ 20:
ರೋಟರಿ ಇಂಡಿಯಾ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ CSR (Corporate Social Responsibility) ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ, ಜೆಎಸ್‌ಡಬ್ಲ್ಯೂ ಫೌಂಡೇಶನ್ 2025ರ ಅತ್ಯುತ್ತಮ CSR ಸಂಸ್ಥೆಯಾಗಿ ಆಯ್ಕೆಯಾಗಿ ಪ್ರಶಸ್ತಿಯನ್ನು ಗಳಿಸಿದೆ. ಶಿಕ್ಷಣ ಮತ್ತು ಜಲ ನಿರ್ವಹಣೆ ಕ್ಷೇತ್ರದಲ್ಲಿ ಸಂಸ್ಥೆಯು ಕೈಗೊಂಡ ಉಲ್ಲೇಖನೀಯ ಅಭಿವೃದ್ಧಿ ಕಾರ್ಯಗಳು ಈ ಗೌರವಕ್ಕೆ ಕಾರಣವಾಗಿವೆ.
ಬೆಂಗಳೂರು ನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ದಕ್ಷಿಣ ಭಾರತದ ವಲಯ ಮುಖ್ಯಸ್ಥರಾದ ಪೆದ್ದಣ್ಣ ಬೀಡಾಲ ಹಾಗೂ ಹಿರಿಯ ವ್ಯವಸ್ಥಾಪಕರಾದ ರಾಜಶೇಖರ ರಾಜು ಅವರು ಜೆಎಸ್‌ಡಬ್ಲ್ಯೂ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಬಳ್ಳಾರಿ ಜಿಲ್ಲೆಯನ್ನು ಒಳಗೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ಸಮುದಾಯ ಆಧಾರಿತ ಅಭಿವೃದ್ಧಿಗೆ ಒತ್ತು ನೀಡಿರುವ ಜೆಎಸ್‌ಡಬ್ಲ್ಯೂ ಫೌಂಡೇಶನ್, ಸುಮಾರು 40 ಗ್ರಾಮಗಳಲ್ಲಿ ಜಲ ಸಂರಕ್ಷಣಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇವುಗಳಲ್ಲಿ ಚೆಕ್‌ಡ್ಯಾಮ್‌ಗಳು, ಕೃಷಿ ಹೊಂಡಗಳು, ಮಳೆನೀರು ಸಂಗ್ರಹಣೆ ಮುಂತಾದ ಕ್ರಮಗಳ ಮೂಲಕ ಪ್ರದೇಶದ ಭೂಗರ್ಭ ಜಲಮಟ್ಟವನ್ನು ಪುನರುಜ್ಜೀವನಗೊಳಿಸಲಾಗಿದ್ದು, 1,500 ಕ್ಕೂ ಹೆಚ್ಚು ಕುಟುಂಬಗಳಿಗೆ ಶಾಶ್ವತವಾಗಿ ನೀರಿನ ಲಭ್ಯತೆ ಒದಗಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿಯೂ ಸಂಸ್ಥೆಯು ವಿಶಿಷ್ಟ ಸಾಧನೆ ಮಾಡಿದೆ. ಸಮಗ್ರ ಕಲಿಕೆಗೆ ಉತ್ತೇಜನ, ಜೀವನ ಕೌಶಲ್ಯಗಳ ಅಭಿವೃದ್ಧಿ, ಫಲಿತಾಂಶ ಸುಧಾರಣೆ ಮತ್ತು ಶಾಲಾ ಮೂಲಭೂತ ಸೌಕರ್ಯಗಳ ಬಲವರ್ಧನೆ ಕಾರ್ಯಗಳಿಂದ 1,564 ಶಾಲೆಗಳ, 1,83,749 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೇರ ಪ್ರಯೋಜನವಾಗಿದೆ.
ಪ್ರಶಸ್ತಿ ಸ್ವೀಕರಿಸಿ ಪೆದ್ದಣ್ಣ ಬೀಡಾಲ ಅವರು ಮಾತನಾಡಿ…
“ಈ ಪ್ರಶಸ್ತಿ ನಮ್ಮ ತಂಡದ ಶ್ರಮ ಮತ್ತು ಸಮುದಾಯಗಳ ವಿಶ್ವಾಸಕ್ಕೆ ನೀಡಿದ ಮಾನ್ಯತೆ. ಸುಸ್ಥಿರ ಅಭಿವೃದ್ಧಿ ಮತ್ತು ಜನರ ಸಬಲೀಕರಣವೇ ನಮ್ಮ ಕಾರ್ಯದ ಮೂಲ ಉದ್ದೇಶ. ಈ ಗೌರವಕ್ಕಾಗಿ ರೋಟರಿ ಇಂಡಿಯಾಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ನಮ್ಮ ಎಲ್ಲಾ ಪಾಲುದಾರರು, ಸಿಬ್ಬಂದಿ ಮತ್ತು ಗ್ರಾಮೀಣ ಸಮುದಾಯಗಳ ಸಹಕಾರದಿಂದಲೇ ಈ ಸಾಧನೆ ಸಾಧ್ಯವಾಗಿದೆ.” ಅವರು ಮುಂದುವರೆದು, “ಜೆಎಸ್‌ಡಬ್ಲ್ಯೂ ಫೌಂಡೇಶನ್ ಶಿಕ್ಷಣ, ಆರೋಗ್ಯ, ಪರಿಸರ, ಜೀವನೋಪಾಯ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಲು ಬದ್ಧವಾಗಿದೆ,”
ಎಂದು ಹೇಳಿದರು.
ರೋಟರಿ ಇಂಡಿಯಾ ರಾಷ್ಟ್ರೀಯ CSR ಪ್ರಶಸ್ತಿ ಕಾರ್ಯಕ್ರಮದಲ್ಲಿ ದೇಶದ ಅನೇಕ ಪ್ರಮುಖ ಕಂಪನಿಗಳ ಸಾಮಾಜಿಕ ಬದ್ಧತೆಯ ಕೆಲಸಗಳಿಗೆ ಗೌರವ ಸಲ್ಲಿಸಲಾಯಿತು. ಈ ಪೈಕಿ ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಕಾರ್ಯಚಟುವಟಿಕೆಗಳು “ಸಮಾಜ ಪರಿವರ್ತನೆಗೆ ಮಾದರಿ” ಎಂದು ಪ್ರಶಂಸಿಸಲ್ಪಟ್ಟವು.
