ಸಂಡೂರು, ಅಕ್ಟೋಬರ್ 27:
ತೋರಣಗಲು ಹೋಬಳಿಯ ಕುರೆಕುಪ್ಪ ಗ್ರಾಮದಲ್ಲಿ ಭಾರೀ ಮಳೆ ಅವಾಂತರ ಸೃಷ್ಟಿಸಿದೆ. ಗ್ರಾಮದ 5ನೇ ವಾರ್ಡ್‌ನ ನಿವಾಸಿ ಕೆ. ಸಣ್ಣ ರುದ್ರಪ್ಪ (ತಂದೆ ಗಾದಿ ಲಿಂಗಪ್ಪ) ಅವರ ಮನೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಗೋಡೆ ಭಾಗಶಃ ಕುಸಿದು ಬಿದ್ದು ಮನೆ ಹಾನಿಗೊಳಗಾಗಿದೆ.
ಈ ಅವಘಡದಿಂದ ಕುಟುಂಬದವರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಪ್ರಾಣಾಪಾಯ ತಪ್ಪಿಸಿಕೊಂಡಿದ್ದಾರೆ. ಮನೆಯು ವಾಸಯೋಗ್ಯವಾಗದ ಪರಿಸ್ಥಿತಿ ಉಂಟಾಗಿರುವುದರಿಂದ ಕುಟುಂಬವು ತಾತ್ಕಾಲಿಕವಾಗಿ ನೆರೆಹೊರೆಯವರ ಮನೆಯಲ್ಲಿ ಆಶ್ರಯ ಪಡೆದಿದೆ. ಕುರುಬ ಸಮುದಾಯಕ್ಕೆ ಸೇರಿದ ಸಣ್ಣ ರುದ್ರಪ್ಪ ಅವರ ಕುಟುಂಬ ಈಗ ದಿಕ್ಕುತೋಚದ ಸ್ಥಿತಿಯಲ್ಲಿದೆ.
ಘಟನೆಯ ನಂತರ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹಾನಿಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸ್ಥಳೀಯರು ಸಂತ್ರಸ್ತ ಕುಟುಂಬಕ್ಕೆ ಸರಕಾರದಿಂದ ತಕ್ಷಣ ಪರಿಹಾರ ಒದಗಿಸಲು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿ, ಹಾನಿ ವರದಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ಸಂತ್ರಸ್ತರಿಗೆ ಶೀಘ್ರ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
