ಸಂಡೂರು ಪಟ್ಟಣದಲ್ಲಿ ಸೋಮವಾರ ಮಹತ್ವದ ಪ್ರತಿಭಟನೆ ನಡೆದು ಗಮನ ಸೆಳೆಯಿತು. ಮಸಣ ಕಾರ್ಮಿಕರು ಹಾಗೂ ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಗಳು ಸಮೂಹವಾಗಿ ತಾಲೂಕು ಪಂಚಾಯಿತಿ ಕಾರ್ಯಾಲಯ (ತಾಪಂ) ಕಚೇರಿ ಎದುರು ಧರಣಿ ನಡೆಸಿ, ತಾಪಂ ಇಒ ಮಡಗಿನ ಬಸಪ್ಪ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ಮಟ್ಟದಲ್ಲಿ ಮಸಣ ಭೂಮಿಗಳ ಅವ್ಯವಸ್ಥೆ, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಮಸಣ ಕಾರ್ಮಿಕರ ಹಕ್ಕು-ಸ್ವಾಭಿಮಾನ ರಕ್ಷಣೆಗೆ ಓದಿದ ಬೇಡಿಕೆಗಳು ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಧರಣಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಸಂಘದ ತಾಲೂಕು ಕಾರ್ಯದರ್ಶಿ ಎಚ್.ದುರುಗಮ್ಮ ಹಾಗೂ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಮಸಣಗಳ ಕಳಪೆ ಸ್ಥಿತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿ ಅವರು ಹೇಳಿದರು:
“ತಾಲೂಕಿನ ಬಹುತೇಕ ಗ್ರಾಮಗಳ ಮಸಣಗಳು ಸಂಪೂರ್ಣ ಅವ್ಯವಸ್ಥೆಯಾಗಿದೆ.
ಶವಗಳನ್ನು ತರಲು ಸರಿಯಾದ ದಾರಿ ಇಲ್ಲದಿರುವುದು ಕುಟುಂಬಗಳಿಗೆ ದೊಡ್ಡ ಸಂಕಷ್ಟವನ್ನು ಉಂಟುಮಾಡುತ್ತಿದೆ.”
“ಸ್ಮಶಾನ ಪ್ರದೇಶಗಳಲ್ಲಿ ಕಸಕಡ್ಡಿಯ ರಾಶಿ, ಜಾಗದ ಅಸವ್ಯವಸ್ಥೆ ಹಾಗೂ ನೀರು–ಬೆಳಕು ವ್ಯವಸ್ಥೆಯ ಕೊರತೆ ಇನ್ನೂ ಮುಂದುವರಿದಿದೆ.
ಮರಣೋತ್ತರ ವಿಧಿ ಪೂರ್ಣಗೊಳಿಸುವುದಕ್ಕೆ ಅಗತ್ಯವಾದ ಅತಿ ಮೂಲಭೂತ ಸೌಲಭ್ಯಗಳೂ ಇಲ್ಲ.”
“ಸ್ಮಶಾನ ಸುತ್ತ ಕಾಂಪೌಂಡ್ ತಡೆಗೋಡೆ,
ಒಳಗೆ ವಿಶ್ರಾಂತಿ ಕೊಠಡಿ, ಶೌಚಾಲಯ,
ಕುಡಿಯುವ ನೀರು, ಬೆಳಕಿನ ವ್ಯವಸ್ಥೆ
ತಕ್ಷಣ ಒದಗಿಸಬೇಕು.”
“ಮಸಣ ಕಾರ್ಮಿಕರು ಮರಣೋತ್ತರ ವಿಧಿಗಳನ್ನು ನೆರವೇರಿಸುವ ಮೂಲಕ ಸಮಾಜದ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊರುತ್ತಿದ್ದಾರೆ. ಆದರೆ ಇಂದಿಗೂ ಅವರಿಗೆ ಮೂಲಭೂತ ಜೀವನ–ಭದ್ರತೆ, ಗೌರವ, ಹಾಗೂ ಸರಿಯಾದ ಸೌಲಭ್ಯಗಳ ಕೊರತೆ ಇದೆ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕಣ್ಣು ತೆರೆಯಬೇಕು.” ಎಂದರು
ಕಾರ್ಯಕರ್ತರು ಮತ್ತಷ್ಟು ಬೇಡಿಕೆಗಳನ್ನು ಮಂಡಿಸಿದರು:
■ಶವಕ್ಕೆ ಕುಣಿ ತೆಗೆದು ಮುಚ್ಚುವ ಕಾರ್ಯಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೌರವಧನ ನಿಗದಿ ಮಾಡಬೇಕು.
■ಮಸಣ ಕಾರ್ಮಿಕರಿಗೆ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ನೀಡಬೇಕು.
■ಕೆಲಸ ಮಾಡುವಾಗ ರಕ್ಷಿಸಿಕೊಳ್ಳಲು ಗ್ಲವ್ಸ್, ಮಾಸ್ಕ್, ಬೂಟು, ಟಾರ್ಚ್ ಸೇರಿದಂತೆ ಸುರಕ್ಷತಾ ಸಾಮಗ್ರಿಗಳನ್ನು ಕಡ್ಡಾಯವಾಗಿ ಒದಗಿಸಬೇಕು.
■ತಲೆಮಾರುಗಳಿಂದ ಅರಣ್ಯ ಹಾಗೂ ಸರ್ಕಾರಿ ಭೂಮಿಗಳಲ್ಲಿ ಬೆಳೆ ಬೆಳೆಸಿ ಬದುಕುತ್ತಿರುವ ಮಸಣ ಕಾರ್ಮಿಕರಿಗೆ ಪಟ್ಟುಪತ್ರ (ಹಕ್ಕುಪತ್ರ) ನೀಡಬೇಕು ಎಂದರು
ಈ ಸಂಧರ್ಭದಲ್ಲಿ
ಮಾರಮ್ಮ (ತಾಲೂಕು ಅಧ್ಯಕ್ಷೆ),
ಹುಲಿಗೆಮ್ಮ, ಹುಲುಗಪ್ಪ, ತಾಯಪ್ಪ, ಲಕ್ಷ್ಮಣ, ಮರಿಯಪ್ಪ, ಹನುಮಂತಪ್ಪ,
ಪಕೀರಪ್ಪ, ಶಿವಮೂರ್ತಿ, ಗಂಗಪ್ಪ, ಅಂಜಿನಪ್ಪ, ನಾಗಪ್ಪ, ಕುಮಾರಸ್ವಾಮಿ, ಹುಲುಗಪ್ಪ, ಬಸವರಾಜ ಮುಂತಾದವರು.
ಪ್ರತಿಭಟನೆ ಶಾಂತಿಪೂರ್ಣವಾಗಿ ನಡೆದಿದ್ದು, ತಾಪಂಇಒ ಬಸಪ್ಪ ಅವರಿಗೆ ಸಮಗ್ರ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳ ಸ್ಪಂದನೆಗಾಗಿ ಕಾರ್ಮಿಕರು ಈಗ ಕಾತರದಿಂದ ಕಾಯುತ್ತಿದ್ದಾರೆ.
