ಸಂಡೂರು:
“ಹಾರ್ವರ್ಡ್ ವಿಶ್ವವಿದ್ಯಾಲಯದ ಸುದೀರ್ಘ ಸಂಶೋಧನೆಯ ಪ್ರಕಾರ ಮನುಷ್ಯನ ನಿಜವಾದ ನೆಮ್ಮದಿ ಅಡಗಿರುವುದು ಹಣದಲ್ಲಲ್ಲ, ಬದಲಾಗಿ ನಾವು ಹೊಂದಿರುವ ಉತ್ತಮ ಬಾಂಧವ್ಯಗಳಲ್ಲಿ. ಆದರೆ ದುರದೃಷ್ಟವಶಾತ್, ಇಂದು ಸಂಪಾದನೆ ಹೆಚ್ಚಾದಂತೆ ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ” ಎಂದು ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ‘ಸ್ನೇಹ ಸಮಾಗಮ; ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನನ್ನ ತಂದೆಗೆ ಬರುತ್ತಿದ್ದ ಮೂರು ಸಾವಿರ ಸಂಬಳದಲ್ಲಿ 11 ಮಂದಿಯನ್ನು ಸಣ್ಣದಾದ ಮನೆಯಲ್ಲಿ ಸಾಕಿ, ಸಲಹಿದ ನನ್ನ ತಂದೆಯ ಸ್ಥಾನ ಆವಾಗ ಅರಿವಾಗಿರಲಿಲ್ಲ, ನಾನು ಮೂರು ಲಕ್ಷದ ಸಂಬಳ ಪಡೆದು, 3 ಕೋಟಿಯ ಬಂಗಲೆ ಕಟ್ಟಿದ್ದರು ಆ ನೆಮ್ಮದಿಯ ಬದುಕು ಈಗಿಲ್ಲ, ಸಂಬಂಧ ಮತ್ತು ಸ್ನೇಹಿತರಿಂದ ನಾವು ದೂರವಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಭಾವುಕರಾಗಿ ನುಡಿದರು.
“ಈ ಸ್ನೇಹ ಸಮ್ಮಿಲನವು ಹಳೆಯ ವಿದ್ಯಾರ್ಥಿಗಳನ್ನು ಗತಕಾಲದ ದಿನಗಳಿಗೆ ಕರೆದೊಯ್ಯುವ ಮೂಲಕ, ನಮ್ಮನ್ನು ನಾವೇ ಪುನಃ ಕಂಡುಕೊಳ್ಳುವ ಅಪರೂಪದ ಅವಕಾಶವನ್ನು ಒದಗಿಸಿದೆ” ಎಂದು ಅವರು ಅಭಿಪ್ರಾಯಪಟ್ಟರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ,ಮಲೆನಾಡಿನ ಸೊಬಗನ್ನು ಹೊಂದಿರುವ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕೇವಲ ಸಾಂಪ್ರದಾಯಿಕ ವಿಷಯಗಳನ್ನು ಬೋಧಿಸುವ ಬದಲು, ಜಾಗತಿಕ ಮಟ್ಟದಲ್ಲಿ ಉದ್ಯೋಗ ಲಭಿಸುವಂತಹ ಅತ್ಯಾಧುನಿಕ ಕೋರ್ಸ್‌ಗಳನ್ನು ಆರಂಭಿಸಿ, ಇದನ್ನೊಂದು ‘ಸಂಪೂರ್ಣ ವಸತಿ ಸಹಿತ (Residential) ಸ್ನಾತಕೋತ್ತರ ಕೇಂದ್ರ’ವನ್ನಾಗಿ ರೂಪಿಸಲಾಗುವುದು ಎಂದರು.
“ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ (ಸುಮಾರು 2 ಲಕ್ಷ ರೂ.) ವೆಚ್ಚವಾಗುವ ಕೋರ್ಸ್‌ಗಳನ್ನು ನಮ್ಮ ಕೇಂದ್ರದಲ್ಲಿ ಕೇವಲ 25 ಸಾವಿರ ರೂಪಾಯಿಗಳಿಗೆ ನೀಡುವ ಗುರಿ ಹೊಂದಿದ್ದೇವೆ. ಬೆಂಗಳೂರು ವಿವಿಯಲ್ಲಿನ ಪ್ರಯೋಗದ ಮಾದರಿಯಲ್ಲೇ ಇಲ್ಲೂ ಕೂಡ ಬಿ.ಕಾಂ. ಕೋರ್ಸಿನಲ್ಲಿ ಹೊಸ ವಿಷಯಗಳು, ಬಹು ಬೇಡಿಕೆ ಇರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಇತರ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಲಾಗುವುದು” ಎಂದರು. ಗಣಿಗಾರಿಕೆ ಪ್ರದೇಶವಾಗಿರುವುದರಿಂದ ಇಲ್ಲಿನ ಬಹುಕಾಲದ ಬೇಡಿಕೆಯಾಗಿರುವ ‘ಸ್ಕೂಲ್ ಆಫ್ ಮೈನಿಂಗ್’ ಆರಂಭಿಸಲು ಧನಬಾದ್ ಐಐಟಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಚನ್ನಪ್ಪ, “ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರವು ಕೇವಲ ಒಂದು ಶಿಕ್ಷಣ ಸಂಸ್ಥೆಯಲ್ಲ, ಅದೊಂದು ಜ್ಞಾನದ ದೀವಿಗೆ” ಎಂದು ಬಣ್ಣಿಸಿದರು.
ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿಕೊಂಡ ಅವರು, “ನನ್ನಂತಹ ಹಾಗೂ ಗ್ರಾಮೀಣ ಭಾಗದ ಸಾವಿರಾರು ಬಡ ವಿದ್ಯಾರ್ಥಿಗಳ ಬಾಳಿಗೆ ಈ ಕೇಂದ್ರವು ಅಕ್ಷರಶಃ ಬೆಳಕು ನೀಡಿದೆ. ಇಲ್ಲಿನ ಪರಿಸರ ಮತ್ತು ಶಿಕ್ಷಣವೇ ನಮ್ಮ ಏಳಿಗೆಗೆ ಬುನಾದಿ” ಎಂದು ಅತ್ಯಂತ ಭಾವನಾತ್ಮಕವಾಗಿ ನುಡಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ ಬಾಣದ್ ಮಾತನಾಡಿ, ಕೇಂದ್ರದ ಪ್ರತಿಯೊಂದು ವಿಭಾಗದ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶೈಕ್ಷಣಿಕ ಏಳಿಗೆಗಾಗಿ ಹಳೆಯ ವಿದ್ಯಾರ್ಥಿಗಳ ಸಂಘವು ವಿಶ್ವವಿದ್ಯಾಲಯದೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದೆ ಎಂದರು.
ಕೇಂದ್ರದ ನಿರ್ದೇಶಕ ಡಾ. ಬಿ. ರವಿ ಮಾತನಾಡಿ, “ಕೇಂದ್ರವು 50 ವಸಂತಗಳನ್ನು ಪೂರೈಸಿದ್ದು, ಅದ್ಧೂರಿ ಸುವರ್ಣ ಮಹೋತ್ಸವ ಆಚರಿಸಲಾಗುವುದು. ಅದಕ್ಕೆ ಪೂರ್ವಭಾವಿಯಾಗಿ ಹಳೆಯ ವಿದ್ಯಾರ್ಥಿಗಳ ಸಲಹೆ ಮತ್ತು ಸಹಕಾರ ಪಡೆಯಲು ಈ ಸಭೆ ಆಯೋಜಿಸಲಾಗಿದೆ. ಕುಲಪತಿಗಳು ಕೇಂದ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಸಂಸದರು ಕೇಂದ್ರಕ್ಕೆ ಸಾಕಷ್ಟು ಸೌಕರ್ಯ ಕಲ್ಪಿಸಿದ್ದಾರೆ” ಎಂದು ಹೇಳಿದರು.
ನಂದಿಹಳ್ಳಿ ಪಿಜಿ ಕೇಂದ್ರದ ಹಳೆಯ ವಿದ್ಯಾರ್ಥಿಗಳಾದ ಡಾ. ಬಿ. ನಾಗನಗೌಡ, ಎಚ್. ವೈ. ದೇಸಾಯಿ, ಜೆ.ಎಂ. ಬಸವರಾಜ, ಅರುಣಕುಮಾರಿ ಕಾಳೆ, ಶಾರದಾಬಾಯಿ, ಷಣ್ಮುಖಪ್ಪ ಮಂದಾ ಳ್, ಮಲ್ಲಮ್ಮ, ಜ್ಯೋತಿ ಉಮೇಶ ತಮ್ಮ ವಿದ್ಯಾರ್ಥಿ ದಿನಗಳನ್ನು ಸ್ಮರಿಸಿಕೊಂಡರು.
ಖನಿಜ ಸಂಸ್ಕರಣೆ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಎಂ. ಶಶಿಧರ್ ಸ್ವಾಗತ ಕೋರಿದರು. ಕನ್ನಡ ವಿಭಾಗದ ಡಾ. ಮಲ್ಲಯ್ಯ ವಂದನಾರ್ಪಣೆ ಸಲ್ಲಿಸಿದರು. ಅರ್ಥಶಾಸ್ತ್ರ ವಿಭಾಗದ ಡಾ. ಚೌಡಪ್ಪ ನಿರೂಪಿಸಿದರು.
ಬಾಕ್ಸ್:
ನಂದಿಹಳ್ಳಿ ಪಿಜಿ ಕೇಂದ್ರವನ್ನು ಅಂತಾರಾಷ್ಟ್ರೀಯ ಮಟ್ಟದ ‘ರೆಸಿಡೆನ್ಶಿಯಲ್ ಕ್ಯಾಂಪಸ್’ ಮಾಡುವ ಗುರಿ: ಕುಲಪತಿ ಪ್ರೊ. ಮುನಿರಾಜು
ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಹಳೆಯ ನೆನಪುಗಳಿಗೆ ಜಾರಿದ ನಂದಿಹಳ್ಳಿ ಹಳೆಯ ವಿದ್ಯಾರ್ಥಿಗಳು
ಮುಖ್ಯಾಂಶಗಳು:
▪️ ಸಾಂಪ್ರದಾಯಿಕ ಕೋರ್ಸ್‌ಗಳ ಬದಲು ಉದ್ಯೋಗಾಧಾರಿತ ಕೋರ್ಸ್‌ಗಳಿಗೆ ಒತ್ತು.
▪️ ಕಡಿಮೆ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ.
▪️ ಸಂಪೂರ್ಣ ವಸತಿ ನಿಲಯದ ಮಾದರಿ (Residential Campus).
