ಬೆಂಗಳೂರು, ಡಿ.27: ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಲಾದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ) ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಡಿವೈಎಸ್ಪಿ ಮಟ್ಟದ ಅಧಿಕಾರಿಗಳ ನೇಮಕ ವಿಳಂಬವಾಗುತ್ತಿರುವುದು ಎಸ್ಸಿ–ಎಸ್ಟಿ ಸಮುದಾಯದ ದೌರ್ಜನ್ಯ ಪ್ರಕರಣಗಳ ಪರಿಣಾಮಕಾರಿ ತನಿಖೆಗೆ ದೊಡ್ಡ ಅಡ್ಡಿಯಾಗುತ್ತಿದೆ.
ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಡಿಸಿಆರ್ಇ ಪೊಲೀಸ್ ಠಾಣೆಗಳಿಗೆ ತಕ್ಷಣವೇ ಡಿವೈಎಸ್ಪಿಗಳನ್ನು ನೇಮಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತನಿಖೆ ಹಾಗೂ ಸುಳ್ಳು ಜಾತಿ ಪ್ರಮಾಣಪತ್ರಗಳ ತ್ವರಿತ ಪರಿಶೀಲನೆಗಾಗಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಡಿಸಿಆರ್ಇ ಘಟಕವನ್ನು ವಿಶೇಷ ಪೊಲೀಸ್ ಠಾಣೆಯಾಗಿ ಅಧಿಸೂಚಿಸಿ ರಾಜ್ಯಾದ್ಯಂತ 33 ಡಿಸಿಆರ್ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈ ಠಾಣೆಗಳು ಸಾಮಾನ್ಯ ಪೊಲೀಸ್ ಠಾಣೆಗಳಂತೆ ಕಾರ್ಯನಿರ್ವಹಿಸುತ್ತಿವೆ.
ಆದರೆ ಈ 33 ಠಾಣೆಗಳ ಪೈಕಿ ಕೇವಲ 12 ಠಾಣೆಗಳಲ್ಲಿ ಮಾತ್ರ ಡಿವೈಎಸ್ಪಿ ಅಧಿಕಾರಿಗಳ ನೇಮಕವಾಗಿದೆ. ಉಳಿದ 21 ಡಿಸಿಆರ್ಇ ಠಾಣೆಗಳಲ್ಲಿ ಡಿವೈಎಸ್ಪಿ ಸೇರಿ ಅಗತ್ಯ ಸಿಬ್ಬಂದಿಗಳ ಕೊರತೆ ತೀವ್ರವಾಗಿದ್ದು, ಎಸ್ಸಿ–ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆಯನ್ನು ನಿಯಮಾನುಸಾರ ಡಿವೈಎಸ್ಪಿ ಮಟ್ಟದ ಅಧಿಕಾರಿಗಳು ನಡೆಸಬೇಕಾದರೂ, ಪ್ರಸ್ತುತ ಪಿಎಸ್ಐ ಹಾಗೂ ಪಿಐಗಳ ನೇತೃತ್ವದಲ್ಲೇ ತನಿಖೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದರಿಂದ ಪ್ರಕರಣಗಳ ತನಿಖೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಮೋಹನ್ ಕುಮಾರ್ ದಾನಪ್ಪ ಅವರು, ಡಿಸಿಆರ್ಇ ಠಾಣೆಗಳ ಉದ್ದೇಶವನ್ನೇ ದುರ್ಬಲಗೊಳಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಸಿಆರ್ಇ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಕೂಡ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಅಗತ್ಯ ಸಿಬ್ಬಂದಿಗಳ ಭರ್ತಿಗಾಗಿ ಮನವಿ ಸಲ್ಲಿಸಿದ್ದಾರೆ. ಆದರೂ ಇದುವರೆಗೂ ಸಮರ್ಪಕ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಎಸ್ಸಿ–ಎಸ್ಟಿ ಸಮುದಾಯದ ನ್ಯಾಯ ಮತ್ತು ರಕ್ಷಣೆಗೆ ಸ್ಥಾಪಿಸಲಾದ ಡಿಸಿಆರ್ಇ ಪೊಲೀಸ್ ಠಾಣೆಗಳಲ್ಲಿ ಡಿವೈಎಸ್ಪಿ ನೇಮಕ ತಕ್ಷಣ ಜಾರಿಯಾಗಬೇಕೆಂದು ನಾಗರಿಕ ವಲಯದಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ.
