Wednesday, January 14, 2026
HomeKotturuಕೊಟ್ಟೂರು ಪಟ್ಟಣ ಹಾಗೂ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ – ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವ...

ಕೊಟ್ಟೂರು ಪಟ್ಟಣ ಹಾಗೂ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ – ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವ ಗುರಿ: ಶಾಸಕ ಕೆ. ನೇಮಿರಾಜ್ ನಾಯ್ಕ್

ವರದಿ : ಶಿವರಾಜ್ ಕನ್ನಡಿಗ ಕೊಟ್ಟೂರು

ಕೊಟ್ಟೂರು ಪಟ್ಟಣದ ಪ್ರತಿಯೊಂದು ವಾರ್ಡ್‌ಗಳು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಕೆಆರ್‌ಡಿಪಿ ಯೋಜನೆಯ ಅಡಿಯಲ್ಲಿ ಒಟ್ಟು 36 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ನೇಮಿರಾಜ್ ನಾಯ್ಕ್ ಅವರು ಭೂಮಿಪೂಜೆ ನೆರವೇರಿಸಿದರು.

ಭೂಮಿಪೂಜೆ ನಂತರ ಮಾತನಾಡಿದ ಅವರು, ಮತದಾರರ ಆಶೀರ್ವಾದ ಇರುವವರೆಗೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಹಾಗೂ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ತಮ್ಮ ಮುಖ್ಯ ಗುರಿಯಾಗಿದೆ. ಸಂಪೂರ್ಣ ಕ್ಷೇತ್ರವನ್ನು ಸುಂದರ ಹಾಗೂ ಮಾದರಿ ತಾಲೂಕುಗಳನ್ನಾಗಿ ರೂಪಿಸುವ ಕನಸು ನನ್ನದು ಎಂದು ಹೇಳಿದರು.

ಇಂದು ಕೆಕೆಆರ್‌ಡಿಪಿ ಹಾಗೂ ಗ್ರಾಮೀಣ ಅಭಿವೃದ್ಧಿ ಅನುದಾನದ ಅಡಿಯಲ್ಲಿ ಕೊಟ್ಟೂರು ಪಟ್ಟಣ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಒಟ್ಟು 36 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಅನುದಾನದ ಮೂಲಕ ಸುಸಜ್ಜಿತ ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನನ್ನ ಅವಧಿಯಲ್ಲೇ ಪೂರ್ಣಗೊಳಿಸಲಾಗುವುದು. ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ರೂಪಿಸುವುದೇ ನನ್ನ ಸಂಕಲ್ಪ ಎಂದು ಹೇಳಿದರು.

ಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿದ್ದ ರಸ್ತೆಗಳು ಹಾಗೂ ಚರಂಡಿ ಕಾಮಗಾರಿಗಳನ್ನು ಗುತ್ತಿಗೆದಾರರು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನೂ ಮುಂಬರುವ ಫೆಬ್ರವರಿ 12ರಂದು ನಡೆಯಲಿರುವ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಹಿನ್ನೆಲೆಯಲ್ಲಿ ಪಾದಯಾತ್ರಿಗಳಿಗೆ ಯಾವುದೇ ಕೊರತೆ ಉಂಟಾಗದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಪಾದಯಾತ್ರಿಕರಿಗೆ ಸುಗಮ ಸಂಚಾರಕ್ಕೆ ಹೊಸ ರಸ್ತೆ ನಿರ್ಮಾಣ, ಅಗತ್ಯ ಭದ್ರತೆ, ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ಅಗತ್ಯ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲಾಗುತ್ತಿದೆ. ಪಂಚಾಯಿತಿಯಲ್ಲಿ ವಸತಿ ನಿಲಯಗಳ ಕಾಮಗಾರಿಗಳು ಅಂತಿಮ ಹಂತದಲ್ಲಿವೆ ಎಂದು ಹೇಳಿದರು.

ಕೊಟ್ಟೂರು–ಹಗರಿ–ಗಜಪುರ ಮೂರು ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ಆರಂಭಿಸಲಾಗುವುದು. ತುಂಗಭದ್ರ ಹಿನ್ನೀರಿನ ಬನ್ನಿಗೋಳು ಬಳಿಯಿಂದ ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿ ಪಟ್ಟಣಗಳಿಗೆ ಪ್ರತ್ಯೇಕ ಕುಡಿಯುವ ನೀರು ಸರಬರಾಜು ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬೇಸಿಗೆ ಮುನ್ನವೇ ಜನರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೊಟ್ಟೂರು ಪಟ್ಟಣದಲ್ಲಿ ಈಗಾಗಲೇ ಮಿನಿ ವಿಧಾನಸೌಧ ಕಾಮಗಾರಿ ಪ್ರಗತಿಯಲ್ಲಿದ್ದು, ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಗ್ರೀನ್ ಸಿಗ್ನಲ್ ಲಭಿಸಿದೆ. ಕೊಟ್ಟೂರು ಕ್ಷೇತ್ರಕ್ಕೆ ಮಾದರಿಯಾಗಿ ಕಾಣಬೇಕು ಎಂಬುದು ನನ್ನ ಆಶಯ ಎಂದು ಶಾಸಕ ನೇಮಿರಾಜ್ ನಾಯ್ಕ್ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಯುವ ಮುಖಂಡ ಶೋಬಿತ್, ಎಂ.ಎಂ.ಜೆ. ಬೂದಿ ಶಿವಕುಮಾರ್, ವೈ. ಮಲ್ಲಿಕಾರ್ಜುನ, ಕನ್ನಿಹಳ್ಳಿ ಚಂದ್ರಶೇಖರ್, ವಾಲ್ಮೀಕಿ ಮುಖಂಡ ಫಕೀರಪ್ಪ, ಬಿಎಸ್ಆರ್ ಮೂಗಣ್ಣ, ವಕೀಲರಾದ ಪ್ರಕಾಶ್ ಕೋಡಿಹಳ್ಳಿ, ವೀರೇಶ್, ಐನಳ್ಳಿ ಮಲ್ಲಿಕಾರ್ಜುನ, ದೀಪ ಪ್ರಕಾಶ್, ಸದ್ದಾಂ, ಜಿ. ರಾಜಶೇಖರ್, ಹಳ್ಳಿ ಸುರೇಶ್, ಬಾವಿಕಟ್ಟಿ ಶಿವಾನಂದ್, ರುದ್ರಮುನಿ, ನಾಗಲಪುರ ಬಸಣ್ಣ, ರುದ್ರಜ್ಜ, ಎನ್.ಬಿ. ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments