ಸಂಡೂರು,ಫೆ.01:
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸಂಡೂರು, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಳ್ಳಾರಿ ಹಾಗೂ ಭಾಗಿದಾರರ ಇಲಾಖೆಗಳ ಇವರ ಸಂಯುಕ್ತಾಶ್ರಯದಲ್ಲಿ ಸಂಡೂರು ಪಟ್ಟಣದ ಎಪಿಎಂಸಿ ಹತ್ತಿರದ ಸರ್ಕಾರಿ ಪ್ರೌಢ ಶಾಲೆಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ವಿವಿಧ ಮಾದರಿ ಶಾಲೆಗಳ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸುಸಜ್ಜಿತ ಕಟ್ಟಡ, ಮೂಲಭೂತ ಸೌಲಭ್ಯಗಳು ಮತ್ತು ಹಿತಕರ ವಾತಾವರಣ ಕಲ್ಪಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ನಿರ್ದೇಶನ ನೀಡಿದರು.
ಮಕ್ಕಳ ಹಕ್ಕುಗಳು ಸಂವಿಧಾನ ಬದ್ಧವಾಗಿದ್ದು, ಮಕ್ಕಳಿಗೆ ಕಾನೂನಾತ್ಮಕ ಸಮಸ್ಯೆ ಎದುರಾದಲ್ಲಿ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆಗಳನ್ನು ಮುಕ್ತವಾಗಿ ಹೇಳಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮಕ್ಕಳ ರಕ್ಷಣೆ ಹಾಗೂ ಕಾನೂನು ಸುರಕ್ಷತೆ ಕಾಪಾಡಲು ಮತ್ತು ಪೊಲೀಸ್ ಇಲಾಖೆಯು ಮಕ್ಕಳೊಂದಿಗೆ ಸ್ನೇಹಿ ಸಂಬಂಧ ಬೆಸೆಯಲು ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಕಾನೂನು ಸಲಹೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಕಡ್ಡಾಯವಾಗಿ ಮಾಹಿತಿ ನೀಡಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು, ಈ ನಿಟ್ಟಿನಲ್ಲಿ ಶಾಲಾ ಆವರಣದ 100 ಮೀ. ಅಂತರದಲ್ಲಿ ಧೂಮಪಾನ, ತಂಬಾಕು ಮಾರಾಟ ಮಾಡಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು. ವಿಶೇಷವಾಗಿ ಶಾಲಾ ಆವರಣದಲ್ಲಿ ಪುಂಡರ ಹಾವಳಿ ತಡೆಗಟ್ಟಲು ಪೊಲೀಸ್ ಸಿಬ್ಬಂದಿ ಬೀಟ್ ಮೂಲಕ ಪರಿಶೀಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಆಯೋಗದ ಅಧ್ಯಕ್ಷರು ನಿರ್ದೇಶನ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಸ್ ಸಮಸ್ಯೆಗಳ ಆಗರ ಕೇಳಿ ಬಂದ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಸಕಾಲಕ್ಕೆ ಬಸ್ ಸಂಚಾರ ವ್ಯವಸ್ಥೆ ಒದಗಿಸಬೇಕೆಂದು ಸಾರಿಗೆ ಇಲಾಖೆಯ ಘಟಕ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದರು.
ಬಾಲ್ಯ ವಿವಾಹದ ಪ್ರಚಾರ ಕುರಿತು ಪ್ರಶ್ನಿಸಿದ ವಿದ್ಯಾರ್ಥಿಗೆ ಸ್ಪಂದಿಸಿದ ಆಯೋಗದ ಅಧ್ಯಕ್ಷರು, ಬಾಲ್ಯ ವಿವಾಹವು ಕಾನೂನು ಬಾಹಿರ ಈ ಕುರಿತು ವ್ಯಾಪಕ ಪ್ರಚಾರ ಅಗತ್ಯ. ಶಾಲಾ ಆವರಣ, ಸರ್ಕಾರಿ ಸ್ಥಳಗಳು ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಶಾಶ್ವತ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಶಾಲಾ ಆವರಣ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರು ಯುವಕರು ಚುಡಾಯಿಸಿದ್ದಕ್ಕಾಗಿ ದೂರು ನೀಡಿದರೆ, ಮುಂಬರುವ ದಿನದಲ್ಲಿ ದೂರು ಕೊಟ್ಟವರಿಗೆ ಏನಾದರೂ ಸಮಸ್ಯೆ ಉಂಟಾಗುತ್ತದೇನಾ? ಎನ್ನುವ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಆಯೋಗದ ಅಧ್ಯಕ್ಷರು, ದೂರುದಾರರಿಗೆ ಖಂಡಿತ ಯಾವುದೇ ರೀತಿ ಸಮಸ್ಯೆಯಾಗಲ್ಲ, ಆಯೋಗ, ಇಲಾಖೆಗಳು ಕಿರುಕುಳ ನೀಡಿದವರ ಮೇಲೆ ಸಂಪೂರ್ಣ ನಿಗಾವಹಿಸುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಹೆಣ್ಣು ಮಕ್ಕಳ ತಿಂಗಳ ವೈಯಕ್ತಿಕ ಸಮಸ್ಯೆಗೆ ಕುರಿತು ಪ್ರಶ್ನಿಸಿದ ವಿದ್ಯಾರ್ಥಿನಿಗೆ ಉತ್ತರಿಸಿದ ಆಯೋಗದ ಅಧ್ಯಕ್ಷರು, ಈ ಕುರಿತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಒಂದು ದಿನ ರಜೆ ಮತ್ತು ಪ್ಯಾಡ್ ವಿತರಿಸಿ ಶುಚಿ-ನೈರ್ಮಲ್ಯ ಕಾಪಾಡಬೇಕೆಂದು ನ್ಯಾಯಾಲದ ಆದೇಶವಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುತ್ತಿರುವ ಕೂಗು ಆಲಿಸಿದ ಆಯೋಗದ ಅಧ್ಯಕ್ಷರು ಶಾಲೆಗಳಲ್ಲಿ, ವಸತಿ ನಿಲಯಗಳಲ್ಲಿ ಮೂರು ತಿಂಗಳಿಗೊಮ್ಮೆಯಾದರೂ ಆರೋಗ್ಯ ತಪಾಸಣೆ ಕೈಗೊಳ್ಳಿ ಎಂದು ತಾಲೂಕು ವೈದ್ಯಾಧಿಕಾರಿಗೆ ನಿರ್ದೇಶನ ನೀಡಿದರು.
ಸಂಡೂರು ತಾಲ್ಲೂಕು ತಹಶೀಲ್ದಾರ್ ಅನಿಲ್ ಕುಮಾರ್ ಅವರು ಮಾತನಾಡಿ, ಆಧಾರ್ ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದಂತೆ ತಾಲೂಕು ಕಚೇರಿ ಮತ್ತು ಚೋರನೂರು, ತೋರಣಗಲ್ಲು ಹೋಬಳಿಯ ನಾಡ ಕಚೇರಿಯಲ್ಲಿ ನೂತನ ಕೊಠಡಿ ತೆರೆದಿದ್ದು, ಆಧಾರ್ ಕಾರ್ಡ್ ಸೀಡಿಂಗ್ ಸೇರಿದಂತೆ ಇತರೆ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತದೆ. ವಿಶೇಷವಾಗಿ ಶಾಲಾ ಮಕ್ಕಳ ಆಧಾರ್ ತಿದ್ದುಪಡಿಗಾಗಿ ಎರಡು ದಿನ
ಮೀಸಲು ಇರಿಸಲು ವ್ಯವಸ್ಥೆ ಮಾಡಿಸಲಾಗುತ್ತದೆ ಎಂದು ಸಂವಾದದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಬಗ್ಗೆ ಸಮಸ್ಯೆ ಕೇಳಿದ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರೂ ಹಾಗೂ ಕ್ರಿಯಾಶೀಲ ವ್ಯಕ್ತಿಗಳಾದ ಶಶಿಧರ್ ಕೋಸಂಬೆ ಅವರ ಕ್ಷೇತ್ರ ಭೇಟಿ ಸ್ವಾಗತಾರ್ಹ. ಮುಂಬರುವ ದಿನಗಳಲ್ಲಿ ಆಯೋಗದೊಡನೆ ಸಂಸದರ, ಶಾಸಕರ ಹಾಗೂ ಇಲಾಖ ಅಧಿಕಾರಿಗಳ ಸಹಕಾರದಿಂದ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮವಹಿಸಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರು ಮಾತನಾಡಿ, ಮಕ್ಕಳ ಸಮಸ್ಯೆಗೆ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ತಾಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಸಂವಾದ-ಅರಿವು ಕಾರ್ಯಕ್ರಮಗಳ ಮುಖಾಂತರ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ. ಅನಿಲ್ ಕುಮಾರ್, ತಾಪಂ. ಇಓ ಮಡಗಿನ ಬಸಪ್ಪ
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತ್ರಿವೇಣಿ ಪತ್ತಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾದ ಸುಭದ್ರ ದೇವಿ, ಪುರಸಭೆ ಮುಖ್ಯಾಧಿಕಾರಿ ವಿನಯ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್ ಅಕ್ಕಿ, ಸಮಾಜ ಕಲ್ಯಾಣ ಇಲಾಖೆಯ ಎನ್ ಕೆ ವೆಂಕಟೇಶ್, ಎಸ್ಟಿ ಅಧಿಕಾರಿ ರಂಗನಾಥ ದೇಸಾಯಿ, ಬಿ ಆರ್ ಸಿ ಶರಣಬಸಪ್ಪ, ಸಂಡೂರು ಪೊಲೀಸ್ ವೃತ್ತದ ಪಿಎಸ್ಐ ಡಾಖೇಶ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
