ಸಂಡೂರು ತಾಲೂಕು ತಾರನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣದ ಭಾಗವಾಗಿ ಒಳಾಂಗಣ ಕೀಟನಾಶಕ ಸಿಂಪರಣೆ (IRS) ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೂರ್ವಬಾವಿ ಸಭೆ ಜರುಗಿತು. ಮಾನ್ಯ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಡಾ. ಮರಿಯಂಬಿ, ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ಕುಮಾರ್ ಮತ್ತು ಆಡಳಿತ ವೈದ್ಯಾಧಿಕಾರಿ ಡಾ. ಸುನೀತಾ ಅವರ ನೇತೃತ್ವದಲ್ಲಿ ಸಭೆ ಆಯೋಜಿಸಲಾಯಿತು.
ಈ ಸಭೆಯಲ್ಲಿ ತೋರಣಗಲ್ಲು ವಿಲೇಜ್, ತೋರಣಗಲ್ಲು ಆರ್‌ಎಸ್ ಮತ್ತು ವಡ್ಡು ಉಪಕೇಂದ್ರ ವ್ಯಾಪ್ತಿಯ PHCO, HIO, CHO ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದರು. ಜಿಲ್ಲೆಯಿಂದ ಆಗಮಿಸಿದ್ದ ಡಾ. ಮರಿಯಂಬಿ ಅವರು ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದ ಮಹತ್ವ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಶ್ರೀಮತಿ ನಂದಿನಿ ಕಡಿ ಅವರು ಒಳಾಂಗಣ ಕೀಟನಾಶಕ ಸಿಂಪರಣೆ (IRS) ಮಾಡುವ ವಿಧಾನ, ಸುರಕ್ಷತಾ ಕ್ರಮಗಳು ಮತ್ತು ಕಾರ್ಯನಿರ್ವಹಣೆಯ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ಜಿಲ್ಲಾ VBD ಸಲಹೆಗಾರ ಪ್ರತಾಪ್ ಅವರು ಮನೆಮನೆಗೆ ಭೇಟಿ ನೀಡುವ ಸಂದರ್ಭದಲ್ಲಿನ ಮುಂಜಾಗ್ರತಾ ಕ್ರಮಗಳು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ IEC ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಕುರಿತು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ಸಿಬ್ಬಂದಿಯ ಸಹಕಾರ ಅಗತ್ಯವೆಂದು ಅಧಿಕಾರಿಗಳು ಕರೆ ನೀಡಿದರು. ಸಭೆಯ ಮೂಲಕ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕಾಗಿ ಕ್ಷೇತ್ರಮಟ್ಟದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಲು ನಿರ್ಧರಿಸಲಾಯಿತು.
