ಬೆಂಗಳೂರು: ರಾಜ್ಯದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ವ್ಯಾಪ್ತಿಯ ನೂತನ ಪೊಲೀಸ್ ಠಾಣೆಗಳಲ್ಲಿ ಡಿವೈಎಸ್ಪಿ ಹುದ್ದೆಗಳು ಖಾಲಿ ಇರುವುದರಿಂದ ಎಸ್ಸಿ ಹಾಗೂ ಎಸ್ಟಿ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಯಲ್ಲಿ ವಿಳಂಬ ಉಂಟಾಗುತ್ತಿದೆ ಎಂಬ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು. “ಡಿಸಿಆರ್‌ಇ ಠಾಣೆಗೆ ಆಗ್ತಿಲ್ಲ ಡಿವೈಎಸ್ಪಿ ನೇಮಕ, ಎಸ್ಸಿ-ಎಸ್ಟಿ ದೌರ್ಜನ್ಯ ಕೇಸ್‌ಗಳ ತನಿಖೆಗೆ ಎಫೆಕ್ಟ್” ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿ ಸರ್ಕಾರದ ಗಮನ ಸೆಳೆದಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಕ್ಷಣವೇ ಅಗತ್ಯ ಡಿವೈಎಸ್ಪಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಿದ್ದಾರೆ. ಡಿಸಿಆರ್‌ಇ ಪೊಲೀಸ್ ಠಾಣೆಗಳಲ್ಲಿ ಡಿವೈಎಸ್ಪಿ ಅಧಿಕಾರಿಗಳ ಕೊರತೆಯಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆ ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳ್ಳುವುದಿಲ್ಲ ಎಂಬ ಅಂಶವನ್ನು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೋಹನ್ ಕುಮಾರ್ ದಾನಪ್ಪ ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಕ್ರಮ ಕೈಗೊಂಡಿದೆ. ಡಿಸಿಆರ್‌ಇ ಘಟಕದಲ್ಲಿನ ಇನ್ಸ್‌ಪೆಕ್ಟರ್ ಹುದ್ದೆಯನ್ನು ಡಿವೈಎಸ್ಪಿ ಹುದ್ದೆಗೆ ಮೇಲ್ದರ್ಜೆಗೇರಿಸುವಂತೆ ಹಾಗೂ ಅಗತ್ಯ ಸಂಖ್ಯೆಯಲ್ಲಿ ಡಿವೈಎಸ್ಪಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಲಾಗಿದೆ. ಜೊತೆಗೆ, ಡಿಸಿಆರ್‌ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಶೇಷ ಭತ್ಯೆ ಮಂಜೂರು ಮಾಡುವ ಪ್ರಸ್ತಾವನೆಯನ್ನು 2026-27ನೇ ಸಾಲಿನ ಆಯವ್ಯಯದಲ್ಲಿ ಸೇರಿಸಲು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.

ಡಿಸಿಆರ್‌ಇ ಠಾಣೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಗೆ ವಿಶೇಷವಾಗಿ ಸ್ಥಾಪಿತವಾಗಿವೆ. ಇಂತಹ ಪ್ರಕರಣಗಳಲ್ಲಿ ವೇಗವಾಗಿ ಮತ್ತು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯ. ಆದರೆ ಅಧಿಕಾರಿಗಳ ಕೊರತೆಯಿಂದಾಗಿ ಪ್ರಕರಣಗಳ ಪರಿಶೀಲನೆ, ಸಾಕ್ಷ್ಯ ಸಂಗ್ರಹ ಹಾಗೂ ಚಾರ್ಜ್‌ಶೀಟ್ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಸರ್ಕಾರದ ಇತ್ತೀಚಿನ ನಿರ್ದೇಶನದಿಂದ ಡಿಸಿಆರ್‌ಇ ಠಾಣೆಗಳ ಕಾರ್ಯಕ್ಷಮತೆ ಹೆಚ್ಚಳವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಅಗತ್ಯ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿದರೆ ತನಿಖಾ ಪ್ರಕ್ರಿಯೆ ವೇಗಗೊಳ್ಳುವುದರ ಜೊತೆಗೆ, ಪೀಡಿತರಿಗೆ ನ್ಯಾಯ ದೊರಕುವಲ್ಲಿ ಸಹಾಯವಾಗಲಿದೆ ಎಂದು ಕಾನೂನು ವಲಯದವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ, ಡಿಸಿಆರ್‌ಇ ಠಾಣೆಗಳ ಬಲವರ್ಧನೆ ಮೂಲಕ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಗಳ ತನಿಖೆಗೆ ಹೊಸ ಚೈತನ್ಯ ಸಿಗುವ ನಿರೀಕ್ಷೆಯಿದ್ದು, ನಾಗರಿಕ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದ ಬದ್ಧತೆಯನ್ನು ಈ ಕ್ರಮ ಪ್ರತಿಬಿಂಬಿಸುತ್ತದೆ.
