Monday, March 2, 2026
HomeLatest Newsಸರಕಾರಿ ಕಚೇರಿಯಲ್ಲಿ ವಿಡಿಯೋ ಮಾಡುವುದು ಅಪರಾಧವೇ? ಇಲ್ಲಿದೆ ಸುಪ್ರೀಂ ಕೋರ್ಟ್ ಸ್ಪಷ್ಟನೆ!

ಸರಕಾರಿ ಕಚೇರಿಯಲ್ಲಿ ವಿಡಿಯೋ ಮಾಡುವುದು ಅಪರಾಧವೇ? ಇಲ್ಲಿದೆ ಸುಪ್ರೀಂ ಕೋರ್ಟ್ ಸ್ಪಷ್ಟನೆ!

​ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಪ್ರಶ್ನಿಸುವಾಗ, “ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದರು” ಎಂಬ ಆರೋಪದಡಿ ಪ್ರಕರಣ ದಾಖಲಿಸುವ ಬೆದರಿಕೆಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ, ವಾಸ್ತವವಾಗಿ ಕಾನೂನು ಏನು ಹೇಳುತ್ತದೆ?

“ಕರ್ತವ್ಯಕ್ಕೆ ಅಡ್ಡಿ” ಕಾನೂನಿನ ವಾಸ್ತವ ಏನೆಂದರೆ ​ಹಿಂದಿನ ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್ 353 ಹಾಗೂ ಪ್ರಸ್ತುತ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 132ರ ಅಡಿಯಲ್ಲಿ, ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಪ್ರಕರಣ ದಾಖಲಿಸಬಹುದು. ಆದರೆ, ಈ ಕೆಳಗಿನ ಕ್ರಿಯೆಗಳು “ಕರ್ತವ್ಯಕ್ಕೆ ಅಡ್ಡಿ” ಎನಿಸಿಕೊಳ್ಳುವುದಿಲ್ಲ.

ಬಿ.ಎನ್. ಜಾನ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ (B.N. John v. State of U.P. – 2025) ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಸ್ಪಷ್ಟನೆ ನೀಡುತ್ತಾ, ಕೇವಲ ಮಾತಿನ ಚಕಮಕಿ, ಪ್ರಶ್ನಿಸುವುದು ಇಲ್ಲವೇ ಅಡ್ಡಿಪಡಿಸುವುದು (Obstruction) ಸೆಕ್ಷನ್ 353 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ತಿಳಿಸಿದೆ. ಈ ಸೆಕ್ಷನ್ ಅನ್ವಯವಾಗಬೇಕಾದರೆ ‘ಭೌತಿಕ ಬಲದ ಪ್ರಯೋಗ’ (Physical Force) ಇಲ್ಲವೇ ‘ಹಲ್ಲೆ’ (Assault) ಕಡ್ಡಾಯವಾಗಿ ನಡೆದಿರಬೇಕು ಎಂದು ಆದೇಶಿಸಿ, ಪ್ರಕರಣವನ್ನು ರದ್ದುಗೊಳಿಸಿತು.

​ಕೇವಲ ಜೋರಾಗಿ ಪ್ರಶ್ನಿಸುವುದು. ​ಅಧಿಕಾರಿಯ ಕೆಲಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು. “ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ” ಎಂದು ಪ್ರಕರಣ ದಾಖಲಿಸಲು ಭೌತಿಕ ಬಲದ ಪ್ರಯೋಗ ನಡೆದಿರಬೇಕು. ​ಅಧಿಕಾರಿಯನ್ನು ತಳ್ಳುವುದು, ಎಳೆಯುವುದು, ​ಹಿಡಿದುಕೊಳ್ಳುವುದು ಹಾಗೂ ದೈಹಿಕವಾಗಿ ತಡೆಹಿಡಿಯುವುದು ನಡೆದಿರಬೇಕು. ​ಕೇವಲ ನಿಂತುಕೊಂಡು ವಿಡಿಯೋ ಮಾಡುವುದು ಯಾವುದೇ ಕಾರಣಕ್ಕೂ ಅಪರಾಧವಾಗುವುದಿಲ್ಲ ಎಂದಿದೆ.

ರಮೇಶ್ ಕರೋಶಿ ವಿರುದ್ಧ ಕರ್ನಾಟಕ ಸರ್ಕಾರ (2025) ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪೀಠ ಸರಕಾರಿ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಬಳಿ ಸಾರ್ವಜನಿಕರೊಬ್ಬರು ಜೋರು ಧ್ವನಿಯಲ್ಲಿ ಮಾತನಾಡಿ, ದಾಖಲೆಗಳನ್ನು ಕೇಳಿದ್ದರು. ಇದರಿಂದ ಸಿಟ್ಟಾದ ಅಧಿಕಾರಿ ಆ ವ್ಯಕ್ತಿಯ ವಿರುದ್ಧ “ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ” ಎಂದು Section 353 IPC ರಡಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ವಜಾಗೊಳಿಸಿ “ಕೇವಲ ಜೋರು ಧ್ವನಿಯಲ್ಲಿ ಮಾತನಾಡುವುದು, ಪ್ರಶ್ನಿಸುವುದು, ವಾಗ್ವಾದ ಮಾಡುವುದು ಅಪರಾಧವಲ್ಲ. ಅಧಿಕಾರಿಗಳ ಮೇಲೆ ದೈಹಿಕವಾಗಿ ಬಲಪ್ರಯೋಗ (Physical force) ಮಾಡದ ಹೊರತು ಸೆಕ್ಷನ್ 353ರ ಅಡಿ ಪ್ರಕರಣ ದಾಖಲಿಸುವುದು ಕಾನೂನುಬಾಹಿರ” ಎಂದು ತೀರ್ಪು ನೀಡಿತು.

​ಏಳು ವರ್ಷದೊಳಗಿನ ದಂಡನೆ ಇರುವ ಪ್ರಕರಣಗಳಲ್ಲಿ ಪೊಲೀಸರು ನೇರವಾಗಿ ಬಂಧಿಸುವಂತಿಲ್ಲ. ​ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 41A ಪ್ರಕಾರ, ಮೊದಲು ನೋಟಿಸ್ ನೀಡಿ ವಿಚಾರಣೆಗೆ ಕರೆಯಬೇಕು. ​ನೇರ ಬಂಧನವು ಕೇವಲ ಕೊನೆಯ ಆಯ್ಕೆಯಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.

​ಅಧಿಕಾರಿಯನ್ನು ಪ್ರಶ್ನಿಸುವುದು ಸಾರ್ವಜನಿಕರ ಮೂಲಭೂತ ಹಕ್ಕು. ​ವಿಶೇಷ ಭದ್ರತಾ ನಿರ್ಬಂಧಗಳಿಲ್ಲದಿದ್ದರೆ, ಸಾರ್ವಜನಿಕ ಕಚೇರಿಯ ಕಾರ್ಯಗಳನ್ನು ವಿಡಿಯೋದಲ್ಲಿ ದಾಖಲಿಸುವುದು ಕಾನೂನುಬಾಹಿರವಲ್ಲ. ​ಭ್ರಷ್ಟಾಚಾರ ಕಂಡುಬಂದರೆ ಸಾಕ್ಷ್ಯ ಸಂಗ್ರಹಿಸುವುದು ನಾಗರಿಕ ಹಕ್ಕಿನ ಭಾಗವಾಗಿದೆ. ಆದರೆ ಅಧಿಕಾರಿಯ ಮೈಮೇಲೆ ಕೈಹಾಕುವುದು, ದೈಹಿಕವಾಗಿ ತಳ್ಳುವುದು, ಅಶ್ಲೀಲ, ಅವಹೇಳನಕಾರಿ ಪದಗಳನ್ನು ಬಳಸುವುದು ಹಾಗೂ ಉದ್ದೇಶಪೂರ್ವಕವಾಗಿ ಕೆಲಸವನ್ನು ತಡೆಯುವುದು ಸ್ಪಷ್ಟ ಅಪರಾಧವಾಗುತ್ತದೆ.

ಸರಕಾರಿ ಕಚೇರಿಯಲ್ಲಿ ಕ್ಯಾಮೆರಾ ಆನ್ ಮಾಡಿ ಪ್ರಶ್ನಿಸುವುದು ತಪ್ಪಲ್ಲ. ಆದರೆ ಅದು ಶಾಂತ, ಕಾನೂನುಬದ್ಧ ಮತ್ತು ಗೌರವ ರೀತಿಯಲ್ಲಿ ಇರಬೇಕು. ಅಧಿಕಾರಿಗಳು ಬೆದರಿಸಿ ಸುಳ್ಳು ಪ್ರಕರಣ ದಾಖಲಿಸಿದರೂ, ಕಾನೂನು ಮತ್ತು ನ್ಯಾಯಾಲಯ ಮಂದಿಯ ಪರವಾಗಿ ನಿಲ್ಲುತ್ತದೆ. ಸಾರ್ವಜನಿಕ ಕಚೇರಿಗಳು ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುತ್ತವೆ. ಅಲ್ಲಿ ಭ್ರಷ್ಟಾಚಾರ, ಕರ್ತವ್ಯ ಲೋಪ ನಡೆಯುತ್ತಿದ್ದರೆ, ಅದನ್ನು ಸಾಕ್ಷ್ಯ ಸಮೇತ ಬಯಲಿಗೆಳೆಯಲು ವಿಡಿಯೋ ಮಾಡುವುದು ಸಾರ್ವಜನಿಕರ ಹಕ್ಕು ಎಂದು ಈ ಹಿಂದೆಯೂ ಮದ್ರಾಸ್ ಮತ್ತು ಬಾಂಬೆ ಹೈಕೋರ್ಟ್‌ಗಳು ಅನಿಸಿಕೆಪಟ್ಟಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments