ವರದಿ: ಬಸಯ್ಯಸ್ವಾಮಿ
ಕುರುಗೋಡು :ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ವಾರದ ಸಂತೆ ಮತ್ತು ದೈನಂದಿನ ಸಂತೆ ಮಾರುಕಟ್ಟೆಯ ಬಾಬತ್ತು ಟೆಂಡರ್ ಹರಾಜು ಪ್ರಕ್ರಿಯೆ ಜರುಗಿತು.
2026-27 ಸಾಲಿನ ವಾರದ ಸಂತೆ 1.7೦ಲಕ್ಷ.ರೂ, ದಿನವಾಹಿ ಸಂತೆ ಮಾರುಕಟ್ಟೆ 6.9೦ಲಕ್ಷ.ರೂ ಗೆ ಹರಾಜು ಜರುಗಿತು. ಕಳೆದ ವರ್ಷಕ್ಕಿಂತ ಹೆಚ್ಚಿನ ಬೆಲೆಗೆ ಹರಾಜು ಪ್ರಕ್ರಿಯೆ ಜರುಗಿದ್ದು ವಿಶೇಷವಾಗಿತ್ತು. ಹರಾಜು ಪ್ರಕ್ರಿಯೆ ಬಿರುಸಿನಿಂದ ಕೂಡಿತ್ತು. ವಾರದ ಮಾರುಕಟ್ಟೆಗೆ 5 ಜನ, ದಿನವಾಹಿ ಮಾರುಕಟ್ಟೆಗೆ 4 ಜನ ಬಿಡ್ಡುದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ಟೆಂಡರ್ ಮಾಡಿರುವ ಗುತ್ತಿಗೆದಾರರು ಪುರಸಭೆ ವತಿಯಿಂದ ನೀಡಿರುವ ಸೂಚನೆಗಳಂತೆ ಸುಂಕ ವಸೂಲಿ ಮಾಡಬೇಕು. ಈ ಹರಾಜು 12 ( 1 ವರ್ಷ ) ತಿಂಗಳ ಅವಧಿ ಮಾತ್ರ ಇರುತ್ತದೆ. ಸೂಚನೆಗಳನ್ನು ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪುರಸಭೆ ಸದಸ್ಯರು, ಅಧಿಕಾರಿಗಳು, ಬಿಡ್ಡುದಾರರು ಹಾಗೂ ಮುಖಂಡರು ಇದ್ದರು.
