ವರದಿ:-ಜಿ.ಎಂ. ಬಸಯ್ಯಸ್ವಾಮಿ
ಕುರುಗೋಡು :ಡಾ.ಬಿ.ಆರ್. ಅಂಬೇಡ್ಕರ್ ವಿಶ್ವಮಾನವರು. ಅವರ ಜಯಂತಿ ಆಚರಣೆಯು ಕೆಲವೇ ಜನಾಂಗದವರಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು’ ಎಂದು ಕುರುಗೋಡು ತಹಸೀಲ್ದಾರ್ ನರಸಪ್ಪ ಹೇಳಿದರು.
ಏ. 14ರಂದು ನಡೆಯಲಿರುವ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ, ಹಿಂದುಳಿದ ವರ್ಗದವರಿಗೂ ಅಂಬೇಡ್ಕರ್ ಅವರು ದೊರಕಿಸಿಕೊಟ್ಟಿರುವ ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕಾಟಾಚಾರಕ್ಕೆ ಜಯಂತಿ ಆಚರಿಸುವುದು ಸರಿಯಲ್ಲ. ಅಧಿಕಾರಿಗಳೇ ಸಭೆಗೆ ಬಾರದಿದ್ದರೆ ಹೇಗೆ ಎಂದು ಮುಖಂಡರು ಅಸಮಾಧಾನ ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ನರಸಪ್ಪ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಸಭೆಗೆ ಕಡ್ಡಾಯವಾಗಿ ಹಾಜರಾಗಲು ತಿಳಿಸಲಾಗಿದೆ. ಆದರೂ ನಿರ್ಲಕ್ಷ್ಯ ತೋರಿದವರ ವಿರುದ್ಧ ನೋಟೀಸ್ ಜಾರಿ ಮಾಡುವ ಜತೆಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗುವುದು ಎಂದರು.
ದೊಡ್ಡ ಬಸವೇಶ್ವರ ದೇವಸ್ಥಾನದಿಂದ ಬೆಳಗ್ಗೆ 9 ಕ್ಕೆ ಮಹನೀಯರ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದೆ. ಎಲ್ಲ ಮುಖಂಡರು ಅಧಿಕಾರಿಗಳು ಹಾಜರಿರಬೇಕು. ಪುರಸಭೆಯಿಂದ ಅಂಬೇಡ್ಕರ್ ಪತ್ಥಳಿ ಬಳಿ ಸ್ವಚ್ಛತೆ, ಅಲಂಕಾರ, ಕುಡಿವ ನೀರಿನ ವ್ಯವಸ್ಥೆ, ವೇದಿಕೆ ಕಾರ್ಯಕ್ರಮ, ಹಾಸನ ವ್ಯವಸ್ಥೆ ಮಾಡಬೇಕು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಬೇಕು. ಶಾಲಾ, ಕಾಲೇಜು, ಗ್ರಾಪಂ ಅಂಗನವಾಡಿ ಕೇಂದ್ರ, ಸೇರಿದಂತೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಬೇಕು ಎಂದು ತಹಸೀಲ್ದಾರ್ ನರಸಪ್ಪ ಅಧಿಕಾರಿಗಳಿಗೆ ಸೂಚಿಸಿದರು
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಎಡಿ ರಾಜೇಶ್ವರಿ, ತಾಪಂ ಇಒ ನಿರ್ಮಲಾ, ಗ್ರೇಟ್ 2 ತಹಸೀಲ್ದಾರ್ ಮಲ್ಲೇಶಪ್ಪ ಮುಖಂಡರಾದ ಸಿದ್ದಪ್ಪ, ರುದ್ರಪ್ಪ, ಸುರೇಶ್ ಹಾಜರಿದ್ದರು.
