ವರದಿ:ಜಿಎಂ ಬಸಯ್ಯಸ್ವಾಮಿ
ಕುರುಗೋಡು, ಮಾ.26: ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಚಿಂತನೆ ಮತ್ತು ಭಾರತೀಯ ಸಂಸ್ಕೃತಿಯನ್ನು ಕಲಿಸುವುದು ಅತ್ಯಂತ ಮುಖ್ಯವಾಗಿದ್ದು, ಅದರಿಂದಲೇ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆದುಬರಲು ಸಾಧ್ಯ ಎಂದು ತಹಶೀಲ್ದಾರ್ ನರಸಪ್ಪ ತಿಳಿಸಿದರು.
ಪಟ್ಟಣದ ಬಿ.ಎಂ. ಕುಮಾರಸ್ವಾಮಿ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ “ಆರೋಹಣ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ನಮ್ಮನಾಡು–ನಮ್ಮದೇಶ ಎಂಬ ದೇಶಾಭಿಮಾನ ಬೆಳೆಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಪಿಸುವುದು ಅಗತ್ಯವಾಗಿದೆ. ಮಕ್ಕಳಲ್ಲಿನ ಭಯವನ್ನು ದೂರ ಮಾಡಿ ಪ್ರೀತಿಯಿಂದ ಬೋಧನೆ ಮಾಡಿದರೆ ಉತ್ತಮ ಜ್ಞಾನ ವೃದ್ಧಿಯಾಗುತ್ತದೆ ಎಂದರು. ಜೊತೆಗೆ, ಉತ್ತಮ ಶಿಕ್ಷಣ ನೀಡುವುದರಷ್ಟೇ ಪೋಷಕರು ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವುದು ಮುಖ್ಯವಾಗಿದ್ದು, ಶಿಕ್ಷಕರು ಮತ್ತು ಪೋಷಕರು ಸಹಭಾಗಿತ್ವದಲ್ಲಿ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಬಸವರಾಜ ಕೂಡ ಮಾತನಾಡಿದರು. ಕಾರ್ಯಕ್ರಮಕ್ಕೆ ಎಂ. ಕುಮಾರಸ್ವಾಮಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಬಿ.ಎಂ. ರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜುನಿಯರ್ ಪುನೀತ್ ರಾಜಕುಮಾರ್ ಅವರ ಡೈಲಾಗ್ ಅನುಕರಣೆ ಗಮನ ಸೆಳೆಯಿತು. ನಂತರ “ಕಾಣದಂತೆ ಮಾಯವಾದನು” ಸೇರಿದಂತೆ ಹಲವು ಹಾಡುಗಳಿಗೆ ಮಕ್ಕಳು ನೃತ್ಯ ಪ್ರದರ್ಶಿಸಿ, ಪೋಷಕರನ್ನು ರಂಜಿಸಿದರು.
ವೇದಿಕೆಯಲ್ಲಿ ಶಾಲೆಯ ಕಾರ್ಯದರ್ಶಿ ಬಿಎಂ. ಜಡೀಸ್ವಾಮಿ, ಪ್ರಾಚಾರ್ಯ ಅಭಿನವ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪೋಷಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಂತರ ನಡೆದ ವಿವಿಧ ವೇಷಭೂಷಣ, ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಒಳಗೊಂಡ ಮಕ್ಕಳ ಮನಮೋಹಕ ನೃತ್ಯ ರೂಪಕಗಳು ನೋಡುಗರ ಮನಗೆದ್ದವು. “ಭಕ್ತ ಪ್ರಹ್ಲಾದ್” ಸಿನಿಮಾದ ಹಾಡು ವಿಶೇಷ ಆಕರ್ಷಣೆಯಾಗಿ ಕಂಡುಬಂತು.
