ವರದಿ: ಅರ್.ಟಿ.ವಿಠ್ಟಲಮೂರ್ತಿ
ಇತ್ತೀಚೆಗೆ ಹಿರಿಯ ಲಿಂಗಾಯತ ನಾಯಕ,ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ಜತೆ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದಾರೆ.ಈ ಚರ್ಚೆಯ ಸಂದರ್ಭದಲ್ಲಿ:’ಡಾಕ್ಟ್ರೇ,ನೀವು ಕೆಪಿಸಿಸಿ ಅಧ್ಯಕ್ಷರಾಗಲು ರೆಡಿಯಾಗಿ’ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಈ ಮಾತು ಹೇಳಿದಾಗ ಪ್ರತಿಕ್ರಿಯಿಸಿದ ಶರಣ ಪ್ರಕಾಶ್ ಪಾಟೀಲ್ ಅವರು:’ಸಾರ್ ನಾನು ಮಂತ್ರಿಯಾಗಿದ್ದುಕೊಂಡೇ ಕೆಪಿಸಿಸಿ ಅಧ್ಯಕ್ಷನಾಗಲು ತಯಾರಿದ್ದೇನೆ’ಎಂದಾಗ :ಹಾಗೇ ಆಗಲಿ ಡಾಕ್ಟ್ರೇ ಅದಕ್ಕೇನು?’ಅಂತ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರಂತೆ.
ಅಂದ ಹಾಗೆ ಕೆಪಿಸಿಸಿಯ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ತರಬೇಕು ಎಂಬ ಸಿದ್ದರಾಮಯ್ಯ ಅವರ ಪ್ರಯತ್ನ ಹೊಸತೇನಲ್ಲ.ಇದೇ ಕಾರಣಕ್ಕಾಗಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್,ಅರಣ್ಯ ಸಚಿವ ಈಶ್ವರ ಖಂಡ್ರೆ,ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಹಲ ನಾಯಕರ ಹೆಸರುಗಳು ಸರತಿಯಲ್ಲಿ ಬಂದು ನಿಂತಿದ್ದವು.
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಪಟ್ಟದಿಂದ ಡಿ.ಕೆ.ಶಿವಕುಮಾರ್ ಕೆಳಗಿಳಿಯುವುದು ನಿಶ್ಚಿತವಾದರೆ ಈ ಜಾಗಕ್ಕೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಬಂದರೆ ಬೆಸ್ಟು ಅಂತ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಲೆಕ್ಕ ಹಾಕಿದ್ದರಂತೆ.
ಹಾಗಂತಲೇ ಡಾ.ಮಹದೇವಪ್ಪ ಅವರ ಬಳಿ ಮಾತನಾಡಿದ್ದ ಸುರ್ಜೇವಾಲ ಅವರು:’ಕರ್ನಾಟಕದ ನೆಲೆಯಲ್ಲಿ ಸಾಮಾಜಿಕ ನ್ಯಾಯದ ರಥವನ್ನು ಎಳೆಯಲು ನೀವು ಸಮರ್ಥರು.ನಿಮಗೆ ರಾಜ್ಯದ ಸಾಮಾಜಿಕ ಸಂರಚನೆಯ ಬಗ್ಗೆ ಸ್ಪಷ್ಟ ಅರಿವಿದೆ.ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಬರಲು ನೀವು ರೆಡಿಯಾಗಿ’ಎಂದಿದ್ದರು.
ಅದರೆ ಸುರ್ಜೇವಾಲ ಅವರ ಮಾತನ್ನು ನಯವಾಗಿ ತಿರಸ್ಕರಿಸಿದ. ಮಹದೇವಪ್ಪ ಅವರು:’ಸಧ್ಯಕ್ಕೆ ಮಂತ್ರಿಯಾಗಿ ಕೆಲಸ ಮಾಡುತ್ತೇನೆ ಸಾಕು ಸಾರ್’ಎಂದಿದ್ದರು.
ಹೀಗೆ ಮಹದೇವಪ್ಪ ಅವರು ಕೆಪಿಸಿಸಿ ಪಟ್ಟವನ್ನು ನಯವಾಗಿ ತಿರಸ್ಕರಿಸಿದರೆ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್,ಈಶ್ವರ ಖಂಡ್ರೆ ಕೂಡಾ ನೈಸಾಗಿ ಜಾರಿಕೊಂಡರು.ಯುದ್ದ ಕಾಲದಲ್ಲಿ ಅಧ್ಯಕ್ಷರಾಗುವುದು ಬೇರೆ.ಆದರೆ ಶಾಂತಿ ಕಾಲದಲ್ಲಿ ಅಧ್ಯಕ್ಷರಾಗಿ ಮಾಡುವುದೇನು?ಎಂಬುದು ಅವರ ಯೋಚನೆ.
ಇದಾದ ನಂತರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ತುಂಬ ಕಾಲ ಫೀಲ್ಡಿನಲ್ಲಿತ್ತಾದರೂ ಈಗ ಇದ್ದಕ್ಕಿದ್ದಂತೆ ಕೆಪಿಸಿಸಿ ಪಟ್ಟದ ರೇಸಿನಿಂದ ಅವರೂ ಮೆಲ್ಲಗೆ ಹಿಂದೆ ಸರಿದಿದ್ದಾರೆ.ಮೂಲಗಳ ಪ್ರಕಾರ ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳು ಸತೀಶ್ ಜಾರಕಿಹೊಳಿ ಅವರ ಬೇಸರಕ್ಕೆ ಕಾರಣವಾಗಿವೆಯಂತೆ.ಹೀಗಾಗಿ ಕೆಪಿಸಿಸಿ ಪಟ್ಟದ ಮೇಲೆ ಕೂರುವ ಉತ್ಸುಕತೆ ಅವರಲ್ಲೂ ಇಲ್ಲ
ಪರಿಣಾಮ?ಹಾಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಟ್ಟದಿಂದ ಕೆಳಗಿಳಿದರೆ ಅ ಜಾಗಕ್ಕೆ ಪ್ರಮುಖ ನಾಯಕರೊಬ್ಬರು ಬರಬೇಕಲ್ಲ?ಹೀಗಾಗಿ ಸಿದ್ದರಾಮಯ್ಯ ಅವರೀಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಮೇಲೆ ಕಣ್ಣು ನೆಟ್ಟಿದ್ದಾರೆ.
ಹೀಗೆ ಅವರು ಶರಣಪ್ರಕಾಶ್ ಪಾಟೀಲ್ ಅವರ ಮೇಲೆ ಗಮನ ಹರಿಸಲು ಕೆಲವು ಕಾರಣಗಳಿವೆ.ಈ ಪೈಕಿ ಮುಖ್ಯವಾದುದು ಶರಣ ಪ್ರಕಾಶ್ ಪಾಟೀಲ್ ಅವರು ಪಕ್ಷದ ಚಟುವಟಿಕೆಗಳಿಗೆ ಹೆಚ್ಚು ಗಮನ ನೀಡಬಲ್ಲರು ಎಂಬುದು.ಯಾಕೆಂದರೆ ಅವರಿಗೆ ಸ್ವಂತದ ವ್ಯಾಪಾರ ವ್ಯವಹಾರಗಳ ಗೋಜಲು ಕಡಿಮೆ.ಹೀಗಾಗಿ ಅವರು ಪಕ್ಷದ ಚಟುವಟಿಕೆಗಳ ಮೇಲೆ ಹೆಚ್ಚು ಗಮನ ಹರಿಸಬಲ್ಲರು.
ಇದೇ ರೀತಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಸರ್ಜುನ ಖರ್ಗೆಯವರಿಗೂ ಅವರು ಆಪ್ತರು.ಹೀಗಾಗಿ ಅವರನ್ನು ಕೆಪಿಸಿಸಿ ಪಟ್ಟಕ್ಕೆ ತಂದರೆ ಯಾರ ವಿರೋಧವೂ ಇರಲಾರದು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.
ಮೂಲಗಳ ಪ್ರಕಾರ,ಮುಂದಿನ ಸಲ ದಿಲ್ಲಿಗೆ ಹೋದಾಗ ಸಚಿವ ಸಂಪುಟ ಪುನರ್ರಚನೆಗೆ ಅನುಮತಿ ಕೊಡಿ ಅಂತ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಲಿರುವ ಸಿದ್ದರಾಮಯ್ಯನವರು ಅದೇ ಕಾಲಕ್ಕೆ ಶರಣ ಪ್ರಕಾಶ್ ಪಾಟೀಲರನ್ನು ಕೆಪಿಸಿಸಿ ಪಟ್ಟಕ್ಕೆ ತರುವ ಪ್ರಪೋಸಲ್ಲನ್ನೂ ಮುಂದಿಡಲಿದ್ದಾರೆ.
ಹೀಗೆ ರಾಹುಲ್ ಗಾಂಧಿ ಅವರ ಮುಂದೆ ಪ್ರಪೋಸಲ್ಲು ಇಡುವ ಮುನ್ನ ಡಾ.ಶರಣ ಪ್ರಕಾಶ್ ಪಾಟೀಲರಿಗೆ ಹೇಳಬೇಕಲ್ಲ?ಆ ಕೆಲಸವನ್ನು ಮೊನ್ನೆ ಅವರು ಪೂರೈಸಿದ್ದಾರೆ.
ಒಂಭತ್ತಕ್ಕೆ ಡಿಕೆಶಿ ದಿಲ್ಲಿಗೆ?
ಈ ಮಧ್ಯೆ ಛಲ ಬಿಡದ ತ್ರಿವಿಕ್ರಮನಂತೆ ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಏಪ್ರಿಲ್ ಒಂಭತ್ತರ ವೇಳೆಗೆ ದಿಲ್ಲಿಗೆ ದೌಡಾಯಿಸುವ ಲೆಕ್ಕಾಚಾರದಲ್ಲಿದ್ದಾರೆ.
ಅವರ ಆಪ್ತರ ಪ್ರಕಾರ,’ಏಪ್ರಿಲ್ ಒಂಭತ್ತರಂದು ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದ ವರಿಷ್ಟರೇ ಮಾತುಕತೆಗಾಗಿ ದಿಲ್ಲಿಗೆ ಆಹ್ವಾನಿಸಲಿದ್ದಾರೆ.
ಸಿಎಂ ಹುದ್ದೆಯ ವಿಷಯದಲ್ಲಿ ರೂಪುಗೊಳ್ಲುತ್ತಿರುವ 3:2 ರ ಸೂತ್ರದ ಬಗ್ಗೆ ಪಕ್ಷದ ವರಿಷ್ಟರು ಡಿ.ಕೆ.ಶಿವಕುಮಾರ್ ಅವರ ಜತೆ ಮಾತನಾಡಿ,ಅನಂತರ ಸಿಎಂ ಸಿದ್ದರಾಮಯ್ಯ ಅವರ ಬಳಿ ಈ ಕುರಿತು ಮಾತನಾಡಲಿದ್ದಾರೆ ಎಂಬುದು ಈ ಅಪ್ತರ ಮಾತು.
ಇದೇ ಅಪ್ತರ ಪ್ರಕಾರ:’ರಾಜ್ಯ ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ಹೆಚ್ಚಾಗುತ್ತಿದ್ದು ಇದು ಪಕ್ಷದ ವರಿಷ್ಟರಿಗೂ ಕನ್ ಫರ್ಮ್ ಆಗಿದೆ.ಹೀಗಾಗಿಯೇ ಸರ್ಕಾರ ಬಂದು ಮೂರು ವರ್ಷ ಕಳೆದ ನಂತರ ಡಿ.ಕೆ.ಸಿವಕುಮಾರ್ ಅವರಿಗೆ ಸಿಎಂ ಪಟ್ಟ ಕಟ್ಟುವ ಲೆಕ್ಜಾಚಾರ ಶುರುವಾಗಿದೆ.
ಆದರೆ ಸಿಎಂ ಸಿದ್ದರಾಮಯ್ಯ ಕ್ಯಾಂಪು ಇದನ್ನೊಪ್ಪುವುದಿಲ್ಲ.’ಯಾರೇನೇ ಆರ್ಭಟ ಮಾಡಲಿ.ನೀವು ನೆಮ್ಮದಿಯಾಗಿ ಮುಂದುವರಿಯಿರಿ ಅಂತ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ.ಹೀಗಾಗಿ ಸಿದ್ದರಾಮಯ್ಯ ಕೂಡಾ ತುಂಬ ತಲೆ ಕೆಡಿಸಿಕೊಳ್ಳುತ್ತಿಲ್ಲ
ಹೀಗಾಗಿ ಈ ಸಲ ವರಿಷ್ಟರ ಕರೆ ಬಂದಾಗ ಸಂಪುಟ ಪುನರ್ರಚನೆಯ ಪ್ರಪೋಸಲ್ಲು ತೆಗೆದುಕೊಂಡು ಅವರು ದಿಲ್ಲಿಗೆ ಹೋಗುತ್ತಾರೆ.ಆದರೆ ಸಂಪುಟ ಪುನರ್ರಚನೆಗೆ ಡಿಕೆಶಿ ತಕರಾರು ಮಾಡಿದರೆ ಮತ್ತು ರಾಹುಲ್ ಗಾಂಧಿ ಅದಕ್ಕೆ ಮಣೆ ಹಾಕಿದರೆ ಸುಮ್ಮನೆ ದಿಲ್ಲಿಯಿಂದ ವಾಪಸ್ಸು ಬರುತ್ತಾರೆ.
ಅಂದ ಹಾಗೆ ಐದು ರಾಜ್ಯಗಳ ವಿದಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬ್ಯುಸಿಯಾಗಿರುವ ರಾಹುಲ್ ಗಾಂಧಿ ಅವರಿಗೆ ಕರ್ನಾಟಕದ ರಾಜಕೀಯ ಸನ್ನಿವೇಶಗಳು ಎಮರ್ಜ್ ಅಗುತ್ತಿರುವ ರೀತಿ ಗೊತ್ತಿದೆ.ಅರ್ಥಾತ್,ಐದು ರಾಜ್ಯಗಳ ಚುನಾವಣೆಯ ನಂತರ ಕರ್ನಾಟಕದಲ್ಲಿ ರಾಜ್ಯಸಭೆ,ವಿಧಾನಪರಿಷತ್ ಚುನಾವಣೆಗಳು ಜೂನ್,ಜುಲೈ ವೇಳೆಗೆ ನಡೆಯಲಿದ್ದು ಅದು ಮುಗಿಯುವ ತನಕ ಯಾವುದೇ ಕ್ರಾಂತಿ ಸಂಭವಿಸುವುದಿಲ್ಲ ಎಂಬುದು ಸಿದ್ದು ಕ್ಯಾಂಪಿನ ಮಾತು.
ಶಾಮನೂರು ಕೋಟೆ ಸೇಫ್ ಆಗಲಿದೆ?
ಇನ್ನು ಏಪ್ರಿಲ್ ಒಂಭತ್ತರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ತಮ್ಮ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಮಿತ್ರಕೂಟಗಳು ನಂಬಿಕೊಂಡಿವೆ.
ಈ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಸಮರ್ಥ್ ಶಾಮನೂರು ಮುಂದಿರುವಂತೆ ಭಾಸವಾಗುತ್ತಿದೆಯಾದರೂ ಮುಸ್ಲಿಂ ಮತಗಳ ವಿಭಜನೆ ತಮ್ಮ ಅಭ್ಯರ್ಥಿಗೆ ಅನುಕೂಲ ಒದಗಿಸಲಿದೆ ಎಂಬುದು ಬಿಜೆಪಿಯ ನಂಬಿಕೆ.
ಅಂದ ಹಾಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಸಾದಿಕ್ ಪೈಲ್ವಾನ್ ಶಸ್ತ್ರ ಕೆಳಗಿಟ್ಟು ಸಮರ್ಥ್ ಶಾಮನೂರ್ ಅವರ ಬೆನ್ನಿಗೆ ನಿಂತಿದ್ದರೂ ಕಣದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಮುಸ್ಲಿಂ ಅಭ್ಯರ್ಥಿಗಳು ಗೆರಿಲ್ಲಾ ವಾರ್ ಮೂಲಕ ಕಾಂಗ್ರೆಸ್ ಹಡಗನ್ನು ಮುಳುಗಿಸುತ್ತಾರೆ ಎಂಬುದು ಬಿಜೆಪಿ ನಂಬಿಕೆ.
ಅದರೆ ಬಿಜೆಪಿಯ ಈ ನಂಬಿಕೆಗೆ ವಿರುದ್ದವಾದ ಸ್ಥಿತಿ ಕ್ಷೇತ್ರದಲ್ಲಿದೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.
ಅವರ ಪ್ರಕಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀ ನಿವಾಸ ದಾಸ ಕರಿಯಪ್ಪ ಅವರು ಯಡಿಯೂರಪ್ಪ ವಿರೋಧಿ ಗ್ಯಾಂಗಿನ ಪ್ರಮುಖರಲ್ಲೊಬ್ಬರಾದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಬೆಂಬಲಿಗರು.ವಾಸ್ತವವಾಗಿ ಮಾಜಿ ಮೇಯರ್ ಅಜಯ್ ಕುಮಾರ್ ಅವರಿಗೆ ಟಿಕೆಟ್ ಕೊಡಿಸುವ ಲೆಕ್ಕಾಚಾರ ಯಡಿಯೂರಪ್ಪ ಬಣದಲ್ಲಿತ್ತು.ಆದರೆ ಅವರ ಲೆಕ್ಕಾಚಾರ ಸ್ಪಷ್ಟ ರೂಪ ಪಡೆಯುವ ಮುನ್ನವೇ ಸಿದ್ದೇಶ್ವರ್ ಗ್ಯಾಂಗು ಶ್ರೀ ನಿವಾಸ ದಾಸ ಕರಿಯಪ್ಪ ಅವರಿಗೆ ಟಿಕೆಟ್ ದಕ್ಕುವಂತೆ ನೋಡಿಕೊಂಡಿತು.ಪರಿಣಾಮ?ಕ್ಷೇತ್ರದಲ್ಲಿರುವ ಯಡಿಯೂರಪ್ಪ ಅವರ ಕ್ಯಾಂಪು ಉಮೇದಿನಿಂದ ಯುದ್ದ ಮಾಡುತ್ತಿಲ್ಲ.ಹೀಗಾಗಿ ಕಳೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿಯ ಭಿನ್ನಮತ ಕಾಂಗ್ರೆಸ್ಸಿಗೆ ಹೇಗೆ ವರಪ್ರದವಾಯಿತೋ?ಈ ಸಲ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ಸಿಗೆ ಅನುಕೂಲ ಒದಗಿಸಿ ಕೊಡಲಿದೆ ಎಂಬುದು ಕೈ ಪಾಳಯದ ವಿಶ್ವಾಸ.
ಇನ್ನು ಮುಸ್ಲಿಂ ಮತ ಬ್ಯಾಂಕಿನಲ್ಲಿ ಬಿರುಕು ಉಂಟಾಗುತ್ತದೆ ಎಂಬುದು ಸುಳ್ಳು.ಯಾಕೆಂದರೆ ತಮ್ಮಲ್ಲಿ ಬಿರುಕು ಮೂಡಿದರೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬುದು ಮುಸ್ಲಿಂ ಮತದಾರರಿಗೆ ಗೊತ್ತು.ಹೀಗಾಗಿ ಬಹುಸಂಖ್ಯಾತ ಮುಸ್ಲಿಮರು ಸಮರ್ಥ್ ಶಾಮನೂರ್ ಅವರ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದು ಕೈ ಪಾಳಯದ ವಿಶ್ವಾಸ.ಸಧ್ಯದ ಸ್ಥಿತಿ ನೋಡಿದರೆ ಕೈ ಪಾಳಯದ ವಿಶ್ವಾಸ ನಿಜವಾಗುವಂತೆ ಕಾಣುತ್ತಿದೆ.
ಇನ್ನು ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಚರಂತಿ ಮಠ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮಧ್ಯೆ ನಡೆಯುತ್ತಿರುವ ಸಂಘರ್ಷ ಸಾಲಿಡ್ಡಾಗಿರುವಂತೆ ಕಾಣುತ್ತಿದೆ.
ಹೀಗಾಗಿ ಗೆಲುವು ಯಾರದ್ದಾಗಲಿದೆ ಎಂಬ ಚಿತ್ರಣ ಸ್ಪಷ್ಟವಾಗಿಲ್ಲವಾದರೂ ಮೇಟಿ ಕುಟುಂಬದ ಕದನ ತಮಗೆ ವರವಾಗುತ್ತದೆ ಅಂತ ಬಿಜೆಪಿ ಮತ್ತು ಚರಂತಿಮಠ ಕುಟುಂಬದ ಕದನ ಮತ್ತು ನಿರಾಣಿ ಗ್ಯಾಂಗಿನ ಅಡ್ಡೇಟು ತಮಗೆ ವರವಾಗಲಿದೆ ಅಂತ ಕೈ ಪಾಳಯ ನಂಬಿಕೊಂಡಿದೆ.
ಮುಂದೇನಾಗುತ್ತದೋ ಕಾದು ನೋಡಬೇಕು.
ಲಾಸ್ಟ್ ಸಿಪ್
ಇನ್ನು ತಮ್ಮ ಸರ್ಕಾರದಲ್ಲಿ ಉಕ್ಕು ಮತ್ತು ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಟಿಫಿಕೇಟು ಕೊಡುವ ದಿನಗಳು ಹತ್ತಿರವಾದಂತಿವೆ.
ಕಾರಣ?ಮೋದಿ ಸರ್ಕಾರದಲ್ಲಿ ಸಚಿವರಾಗಿರುವವರ ಪೈಕಿ ಅತ್ಯಂತ ಹೆಚ್ವು ಬಾರಿ ದೇಶ ಸುತ್ತಿರುವ,ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ಖ್ಯಾತಿ ಕುಮಾರಸ್ವಾಮಿ ಅವರದು.ತಮ್ಮ ಖಾತೆಗೆ ಸಂಬಂಧಿಸಿದಂತೆ ರೂರ್ಕೆಲಾ,ಬಿಲಾಯ್,ಸಿಂಗರೇಣಿ ಸೇರಿದಂತೆ ಪ್ರತಿಯೊಂದು ಕಾರ್ಖಾನೆಗಳಿಗೆ ಭೇಟಿ ನೀಡಿರುವ,ಹಲವು ರೋಗಗ್ರಸ್ತ ಕಾರ್ಖಾನೆಗಳಿಗೆ ಮರುಚೈತನ್ಯ ನೀಡುವ ಕೆಲಸ ಕುಮಾರಸ್ವಾಮಿ ಅವರಿಂದಾಗಿದೆ.
ಇಂತಹ ಕುಮಾರಸ್ವಾಮಿಯವರ ಸಾದನೆಯ ಬಗ್ಗೆ ಖುಷಿಯಾಗಿರುವ ನರೇಂದ್ರಮೋದಿ ಭೇಷ್ ಎಂದಿದ್ದಾರಂತೆ.ಹೀಗಾಗಿ ತಾವು ಸಚಿವರಾದ ನಂತರ ಮಾಡಿದ ಸಾಧನೆಯ ವಿವರವನ್ನು ಮೋದಿಯವರಿಗೆ ಪುಸ್ತಕದ ರೂಪದಲ್ಲಿ ನೀಡಲು ನಿರ್ಧರಿಸಿರುವ ಕುಮಾರಸ್ವಾಮಿಯವರು,ಕೇಂದ್ರಕ್ಕೆ ಎರಡು ವರ್ಷ ಭರ್ತಿಯಾಗುವ ಸಂದರ್ಭದಲ್ಲಿ ಅದನ್ನು ನೀಡಲಿದ್ದಾರೆ.
