ವರದಿ : ಜಿ ಎಂ ಬಸಯ್ಯ
ಕುರುಗೋಡು/ಕಂಪ್ಲಿ: ಸಮೀಪದ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಖಬರಸ್ತಾನ ಬಳಿಯ ಎಚ್. ವೀರಾಪುರ ರಸ್ತೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಸಗಣಿ ತಿಪ್ಪೆಗೆ ಹತ್ತಿದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹೊಗೆ ಹರಡಲು ಕಾರಣವಾಯಿತು. ಬೆಂಕಿಯ ಜ್ವಾಲೆಗಳು ಪಕ್ಕದಲ್ಲಿದ್ದ ಜಾನುವಾರುಗಳಿಗೆ ಇಡಲಾಗಿದ್ದ ಭತ್ತದ ಬಣವಿಗೆ ತಗುಲುವ ಭೀತಿ ಎದುರಾದಾಗ, ಸ್ಥಳೀಯ ಯುವಕರು ತಕ್ಷಣ ಎಚ್ಚತ್ತುಕೊಂಡರು.
ಅಗ್ನಿಶಾಮಕ ದಳ ತಲುಪುವ ಮುನ್ನವೇ ಯುವಕರು ಚರಂಡಿ ನೀರನ್ನು ಬಳಸಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಅವರ ತಕ್ಷಣದ ಕಾರ್ಯಚಟುವಟಿಕೆ ಮತ್ತು ಜಾಣ್ಮೆಯಿಂದ ಹೆಚ್ಚಿನ ನಷ್ಟ ತಪ್ಪಿ, ಭತ್ತದ ಹುಲ್ಲಿನ ಬಣವಿಯನ್ನು ಉಳಿಸಲು ಸಾಧ್ಯವಾಯಿತು.
ಘಟನೆಯಲ್ಲಿ ಕೆಲವು ಭಾಗಗಳಿಗೆ ಮಾತ್ರ ಹಾನಿಯಾಗಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಥಳೀಯರ ತ್ವರಿತ ಸ್ಪಂದನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
