ಹುಬ್ಬಳ್ಳಿ, ಏಪ್ರಿಲ್ 4:
ಹುಬ್ಬಳ್ಳಿಯಲ್ಲಿ ನಡೆದ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ 191ನೇ ಜಯಂತ್ಯೋತ್ಸವದ ಅಂಗವಾಗಿ ಆಯೋಜಿಸಲಾದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ತಂಡ ಪ್ರಥಮ ಸ್ಥಾನವನ್ನು ಪಡೆದು ಸಾಧನೆ ಮೆರೆದಿದೆ.
ಮಾರ್ಚ್ 29, 2026ರಿಂದ ಏಪ್ರಿಲ್ 2, 2026ರವರೆಗೆ ನಡೆದ ಈ 11ನೇ ವರ್ಷದ ಭಜನಾ ಸ್ಪರ್ಧೆಯನ್ನು ಶ್ರೀ ಮಠದ ಕೈಲಾಸ ಮಂಟಪದಲ್ಲಿ ಭಕ್ತಿಭಾವದಿಂದ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಳ್ಳಾರಿಯ “ಶ್ರೀ ಮನ್ನಿ ಜಗುಣ ಶಿವಯೋಗಿ ತತ್ವಪದ ಮತ್ತು ಜನಪದ ಕಲಾ ತಂಡ (ರಿ)” ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನಕ್ಕೆ ಆಯ್ಕೆಯಾಯಿತು.

ತಂಡದಲ್ಲಿ ಕುರುಗೋಡು ತಾಲೂಕಿನ ಯಲ್ಲಾಪುರ ಗ್ರಾಮದ ಗುರುಗಳಾದ ಬಸಪ್ಪ ಅವರು ನೇತೃತ್ವವಹಿಸಿದ್ದರು. ಗಾಯಕರಾಗಿ ಬಿ. ಬಾಬು ಸ್ವಾಮಿ, ಹೆಚ್. ಪಶುಪತಿಗೌಡ ಪಾಲ್ಗೊಂಡಿದ್ದರು. ಗ್ರಾಮೀಣ ಕಲಾವಿದರಾದ ಗಂಗಾಧರ ಸ್ವಾಮಿ ಹಾಗೂ ಇತರ ಸದಸ್ಯರು ಸಹ ತಮ್ಮ ಪ್ರತಿಭೆಯನ್ನು ತೋರಿಸಿದರು.
ಸಂಗೀತ ಸಹಕಾರದಲ್ಲಿ ಹಾರ್ಮೋನಿಯಮ್ ವಾದಕರಾಗಿ ಜಿ. ಮಹಾಲಿಂಗಯ್ಯ, ಡಗ್ಗ ವಾದಕರಾಗಿ ಎ.ಕೆ. ತಿಪ್ಪೇಸ್ವಾಮಿ ಕಾರ್ಯನಿರ್ವಹಿಸಿದರು. ತಾಳ ಹಿಮ್ಮೇಳದಲ್ಲಿ ವೀರೇಶ, ಪ್ರಕಾಶ್ ಹಾಗೂ ಎಂ.ಪಿ. ವಿಜಯಕುಮಾರ್ ಭಾಗವಹಿಸಿ ಭಜನೆಗೆ ಇನ್ನಷ್ಟು ರಂಜನೆ ತಂದರು.
ತಂಡದ ಎಲ್ಲಾ ಸದಸ್ಯರು ಭಜನೆ ಸೇವೆಯಲ್ಲಿ ತೊಡಗಿ, ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಕೃಪೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆಗೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.
