ವರದಿ : ಜಿ ಎಂ ಬಸಯ್ಯಸ್ವಾಮಿ,
ಕುರುಗೋಡು, ಏಪ್ರಿಲ್ 5: ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಯಾದ ವೀರೇಶ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಸಿಪಿಐಎಂ ಕುರುಗೋಡು ತಾಲ್ಲೂಕು ಘಟಕ, ಆರೋಪಿಯಾಗಿರುವ ಪಾಲಿಕೆ ಸದಸ್ಯ ಕುಬೇರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಪಟ್ಟಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಎಸ್. ಶಿವಶಂಕರ್, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 132, 121 ಹಾಗೂ 221ರ ಪ್ರಕಾರ ಕುಬೇರರ ಸದಸ್ಯತ್ವವನ್ನು ರದ್ದುಪಡಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಕುಬೇರರು ಅನಧಿಕೃತವಾಗಿ ಕಟ್ಟಿರುವ ಮನೆ ಪುರಾತತ್ವ ಇಲಾಖೆಗೆ ಸೇರಿದ ನಿವೇಶನದಲ್ಲಿದೆ ಎಂಬ ಆರೋಪ ಮಾಡಿರುವ ಅವರು, ಮಹಾನಗರ ಪಾಲಿಕೆ ಇಂತಹ ಸ್ಥಳದಲ್ಲಿ ಕಟ್ಟಡ ಪರವಾನಿಗೆ ನೀಡಿದೆಯೇ ಎಂಬುದನ್ನು ಪ್ರಶ್ನಿಸಿದರು. ಪುರಾತತ್ವ ಇಲಾಖೆಯ ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದರ ಕುರಿತು ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದರು.
ಇದಲ್ಲದೆ, ಸ್ಲಂ ನಿವಾಸಿಗಳು ಫಾರಂ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ನಕಲಿ ಪಟ್ಟಾಗಳನ್ನು ಸೃಷ್ಟಿಸಿಕೊಂಡು ಮನೆ ನಿರ್ಮಿಸಿಕೊಂಡಿರುವುದು ಹಾಗೂ ರಾಜ ಕಾಲುವೆ ಒತ್ತುವರಿ ಆಗಿರುವುದಾಗಿ ಅವರು ಆರೋಪಿಸಿದರು. ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 15 ಸ್ಲಂ ಪ್ರದೇಶಗಳಿದ್ದು, ಅರ್ಜಿಗಳು ಸಲ್ಲಿಸಿದ್ದರೂ ಫಲಾನುಭವಿಗಳಿಗೆ ಹಕ್ಕುಪತ್ರ ನೀಡದಿರುವುದನ್ನು ಪ್ರಶ್ನಿಸಿದರು.
ಪಾಲಿಕೆ ನಿಯಮಾವಳಿಗಳನ್ನು ಉಲ್ಲಂಘಿಸಿ ಅಧಿಕಾರಿಗಳನ್ನು ಬೆದರಿಸುವುದು, ದಬ್ಬಾಳಿಕೆ ನಡೆಸುವುದು ಹಾಗೂ ಹಲ್ಲೆ ಮಾಡುವ ಘಟನೆಗಳು ಹೆಚ್ಚುತ್ತಿರುವುದಾಗಿ ಅವರು ಆತಂಕ ವ್ಯಕ್ತಪಡಿಸಿದರು. ಕಳೆದ ಐದು ತಿಂಗಳಿನಿಂದ ನಗರದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು, ಶಾಂತಿ ಕದಡುವ ದುಷ್ಟ ಶಕ್ತಿಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸರ್ಕಾರಿ ನೌಕರ ವೀರೇಶ್ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಪುರಾತತ್ವ ಇಲಾಖೆಯ ನಿವೇಶನದಲ್ಲಿ ನಿರ್ಮಿಸಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಗಾಳಿ ಬಸವರಾಜ, ಎನ್. ಸೋಮಪ್ಪ, ಎನ್. ಹುಲೇಪ್ಪ, ಯು. ಶಂಕ್ರಪ್ಪ, ಎಂ. ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.
