Monday, April 6, 2026
HomeDistrictsBallariಸೋಮಲಾಪುರದಲ್ಲಿ ಅದ್ದೂರಿ ಸಾಮೂಹಿಕ ವಿವಾಹ: 80 ನವಜೋಡಿಗಳಿಗೆ ಆಶೀರ್ವಾದ

ಸೋಮಲಾಪುರದಲ್ಲಿ ಅದ್ದೂರಿ ಸಾಮೂಹಿಕ ವಿವಾಹ: 80 ನವಜೋಡಿಗಳಿಗೆ ಆಶೀರ್ವಾದ

ವರದಿ:ಜಿ ಎಂ ಬಸಯ್ಯಸ್ವಾಮಿ
ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಸೋಮವಾರ ಧಾರ್ಮಿಕ ವಾತಾವರಣದಲ್ಲಿ 80 ನವಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಆರಾಧ್ಯ ದೈವ ಶ್ರೀ ಚಿದಾನಂದ ಅವಧೂತರ 34ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ರಥೋತ್ಸವದ ಜೊತೆಗೆ ಉಚಿತ ಸಾಮೂಹಿಕ ವಿವಾಹವೂ ನೆರವೇರಿತು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ಸದ್ಗುರು ಷಡಕ್ಷರಿ ಅವಧೂತ ಮಹಾಸ್ವಾಮಿಗಳು, ನವಜೋಡಿಗಳು ಉತ್ತಮ ಜೀವನ ನಡೆಸಬೇಕು, ಅವಿಭಕ್ತ ಕುಟುಂಬದೊಂದಿಗೆ ಹಿರಿಯರನ್ನು ಗೌರವಿಸಬೇಕು ಹಾಗೂ ಸಂಸ್ಕೃತಿ ಉಳಿಸುವತ್ತ ಗಮನಹರಿಸಬೇಕು ಎಂದು ಆಶೀರ್ವಚನ ನೀಡಿದರು. ಉತ್ತಮ ಸಂತಾನವನ್ನು ಹೊಂದಿ ಸಂಸ್ಕೃತಿಯ ಸಾರ್ಥಕತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ದುಂದು ವೆಚ್ಚಗಳನ್ನು ತೊರೆದು ಸರಳ ಸಾಮೂಹಿಕ ವಿವಾಹಗಳನ್ನು ಉತ್ತೇಜಿಸುವುದು ಸಮಾಜಕ್ಕೆ ಒಳಿತಾಗುತ್ತದೆ ಎಂದು ತಿಳಿಸಿದರು. ಮಠದ ಹಿರಿಯರ ಆಶೀರ್ವಾದ ಹಾಗೂ ಭಕ್ತರ ಸಹಕಾರದಿಂದ ಹಲವು ವರ್ಷಗಳಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಇದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಇಂದಿನ ದಿನಗಳಲ್ಲಿ ಜನರಲ್ಲಿ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಒಲವು ಕಂಡು ಬರುತ್ತಿದ್ದು, ಮುಂಬರುವ ಮುಂಗಾರು ಮಳೆ ಚೆನ್ನಾಗಿ ಸುರಿದು ರೈತರ ಜೀವನ ಸುಧಾರಿಸಲಿ ಎಂದು ಸಂಕಲ್ಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಸೇರಿದಂತೆ ಹಲವು ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ವೀರಾಪುರ, ಚಿಟಿಗಿನಹಾಳ್, ಎಮ್ಮಿಗನೂರು, ಕಲ್ಲಕಂಭ, ಗುತ್ತಿಗನೂರು, ಓರ್ವಾಯಿ, ಪಟ್ಟಣಸೆರಗು, ನೆಲ್ಲುಡಿ, ಗೆಣಿಕೆಹಾಳ್, ಕ್ಯಾದಿಗೆಹಾಳ್, ಕೋಳೂರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

ಜಾತ್ರೆಯ ಅಂಗವಾಗಿ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಕುರುಗೋಡು ಪಿಎಸ್ಐ ಸುಪ್ರತ್ ವಿರುಪಾಕ್ಷಪ್ಪ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments