ವರದಿ : ಜಿ ಎಂ ಬಸಯ್ಯಸ್ವಾಮಿ
ಕುರುಗೋಡು, ಏ.7: ತಾಲೂಕಿನ ಶ್ರೀರಂಗಪಟ್ಟಣ–ಬೀದರ್ ರಾಜ್ಯ ಹೆದ್ದಾರಿಯ ಕೋಳೂರು ಕ್ರಾಸ್ ಸಮೀಪ ಇಂದು ಬೆಳಿಗ್ಗೆ ಸುಮಾರು 7:18 ಗಂಟೆಗೆ KSRTC ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ.
ಅಪಘಾತದ ವೇಳೆ ಎರಡೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಅನೇಕ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಗಂಭೀರ ಅನಾಹುತದಿಂದ ಪಾರಾಗಿದ್ದಾರೆ. ಬಸ್ ಚಾಲಕರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ, ರಸ್ತೆ ಮೂಲಕ ಸಂಚರಿಸುತ್ತಿದ್ದ KSRTC ಬಸ್ ಹಾಗೂ ಕುರುಗೋಡಿನಿಂದ ಬಳ್ಳಾರಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಚಾಲಕರ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಸೇತುವೆಯಿಂದ ಸ್ವಲ್ಪ ದೂರದಲ್ಲಿ ಈ ಘಟನೆ ನಡೆದಿದ್ದು, ಇದೇ ಘಟನೆ ಸೇತುವೆಯ ಮೇಲೆಯೇ ನಡೆದಿದ್ದರೆ ದೊಡ್ಡ ಅನಾಹುತ ಸಂಭವಿಸಬಹುದಾಗಿತ್ತು ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಡಿಕ್ಕಿಯ ಪರಿಣಾಮ ಎರಡೂ ಬಸ್‌ಗಳ ಮುಂಭಾಗ ಭಾಗವು ಸಂಪೂರ್ಣವಾಗಿ ಜಖಂ ಆಗಿದೆ. ಅಪಘಾತದ ನಂತರ ಕೆಲ ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ನಂತರ ವಾಹನ ಸಂಚಾರವನ್ನು ಪೊಲೀಸರು ಪುನಃ ಸುಗಮಗೊಳಿಸಿದರು.
ಈ ಘಟನೆ ಕುರಿತು ಸಂಬಂಧಪಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
