ವರದಿ : ಜಿ ಎಮ್ ಬಸಯ್ಯಸ್ವಾಮಿ
ಕಂಪ್ಲಿ ತಾಲೂಕು: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಏಪ್ರಿಲ್ 20ರಂದು ನಡೆಯಲಿರುವ ಜಗದ್ಗುರು ಏಕ್ಯೋರಾಮರಾಧ್ಯರ ಹಾಗೂ ವಿಶ್ವಗುರು ಬಸವೇಶ್ವರರ ಜಯಂತಿ ಆಚರಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆ ಗ್ರಾಮದಲ್ಲಿನ ಶ್ರೀ ಪ್ಯಾಟೆ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಬಳ್ಳಾರಿ ವೀರಶೈವ ತರುಣ ಸಂಘದ ಉಪಾಧ್ಯಕ್ಷ ಬಸವರಾಜ ಅವರು, ಪ್ರಸ್ತುತ ಪದ್ಧತಿಯಂತೆ ಸಂಪ್ರದಾಯಬದ್ಧವಾಗಿ ಜಯಂತಿ ಆಚರಣೆಯನ್ನು ಭಕ್ತಿಭಾವದಿಂದ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ವರ್ಷವೂ ಸಮುದಾಯದ ಸಾಂಪ್ರದಾಯಿಕ ವೈಭವವನ್ನು ಉಳಿಸಿಕೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುವ ರೀತಿಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿನದಂದು ಸಂಜೆ 5 ಗಂಟೆಗೆ ಸ್ಥಳೀಯ ಶ್ರೀಹಂಪಿ ಸಾವವುರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಗದ್ಗುರು ಏಕ್ಯೋರಾಮರಾಧ್ಯರು ಹಾಗೂ ಬಸವೇಶ್ವರರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದ್ದು, ಭಕ್ತರ ಪಾಲ್ಗೊಳ್ಳುವಿಕೆ ಹೆಚ್ಚಿರಲಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ಹಂಪಿ ಜಡಿಮೂರ್ತಿ, ಬೇರ್ಗಿ ಹನುಮನಗೌಡ, ಹುಗಾರ್ ಲೋಕೇಶ್, ಎಸ್. ರಾಮಪ್ಪ, ಜಡೇಸಿದ್ದಸ್ವಾಮಿ, ಎಚ್. ವೀರಭದ್ರ, ಎಚ್. ಉಮಾಪತಿ, ಸಜ್ಜನರ ಬಸವರಾಜ, ಜಗದೀಶ ಸೇರಿದಂತೆ ಹಲವು ಮುಖಂಡರು ಹಾಗೂ ವೀರಶೈವ ಸಮುದಾಯದ ಯುವಕರು ಉಪಸ್ಥಿತರಿದ್ದರು.
