ವರದಿ: ಜಿ.ಎಂ. ಬಸಯ್ಯ, ಕುರುಗೋಡು
ಕುರುಗೋಡು ತಾಲೂಕಿನಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ವೇಗ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ತುಂಗಭದ್ರಾ ಜಲಾಶಯದ ಬಲದಂಡೆಯ ಎಲ್‌ಎಲ್‌ಸಿ (Low Level Canal) ಕೆಳಮಟ್ಟದ ಎಮ್ಮಿಗನೂರು ವ್ಯಾಪ್ತಿಯ ಸೂಗೂರು ಡಿಸ್ಟ್ರಿಬ್ಯೂಟರ್ ಕಾಲುವೆ ಪ್ರದೇಶಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಮ್ಮಿಗನೂರು ಗ್ರಾಮ ಆಡಳಿತಾಧಿಕಾರಿ ವಿ. ಮಂಜುನಾಥ ಅವರು, ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ಹೊಸ ಕಸ್ಟ್ ಗೇಟ್ ಅಳವಡಿಸಿರುವ ಕಾರಣದಿಂದ ನೀರಿನ ಹರಿವು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ ಬೇಸಿಗೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಈಗ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಅದನ್ನು ಕಾಲುವೆಗಳ ಮೂಲಕ ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಲುವೆಯ ಅಂಚಿನಲ್ಲಿರುವ ಕೆಲ ರೈತರು ಅನಧಿಕೃತವಾಗಿ ತಮ್ಮ ಜಮೀನುಗಳಿಗೆ ನೀರನ್ನು ಹರಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೆರೆಗಳಿಗೆ ನೀರು ತಲುಪುವಲ್ಲಿ ಯಾವುದೇ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಅನಧಿಕೃತವಾಗಿ ನೀರು ಹರಿಸಿಕೊಳ್ಳುವುದು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಲ್ಲಾ ರೈತರೂ ಸಹಕರಿಸಬೇಕು. ಕೆರೆಗಳಿಗೆ ನೀರು ತುಂಬಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮವಾಗಿದ್ದು, ಇದಕ್ಕೆ ಎಲ್ಲರ ಸಹಭಾಗಿತ್ವ ಅಗತ್ಯ ಎಂದು ಮನವಿ ಮಾಡಿದರು.
ಈ ಪರಿಶೀಲನಾ ವೇಳೆ ತೆಕ್ಕಲಕೋಟೆ ಕಂದಾಯ ನಿರೀಕ್ಷಕ ಗಣೇಶ, ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮ ಆಡಳಿತಾಧಿಕಾರಿ ಮಂಜುನಾಥ, ಮಹಮ್ಮದ್ ರಬ್ ಸೇರಿದಂತೆ ಹಲವರು ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.
