Wednesday, April 8, 2026
HomeDistrictsBallariಗ್ರಾಮ ಪಂಚಾಯತಿಯಲ್ಲಿ ಭಾರೀ ಅಕ್ರಮ ಆರೋಪ: ಸಮಗ್ರ ತನಿಖೆಗೆ ಬಿಜೆಪಿ ಮನವಿ

ಗ್ರಾಮ ಪಂಚಾಯತಿಯಲ್ಲಿ ಭಾರೀ ಅಕ್ರಮ ಆರೋಪ: ಸಮಗ್ರ ತನಿಖೆಗೆ ಬಿಜೆಪಿ ಮನವಿ

ವರದಿ: ಜಿ.ಎಂ. ಬಸಯ್ಯ

ಕುರುಗೋಡು, ಏಪ್ರಿಲ್ 8: ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಭಾರೀ ಅಕ್ರಮಗಳು ಹಾಗೂ ಅನುದಾನದ ದುರುಪಯೋಗ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕುರುಗೋಡು ಮಂಡಲದ ವತಿಯಿಂದ ತಹಸೀಲ್ದಾರ್ ನರಸಪ್ಪ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಂಡಲದ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಅವರು, 2021-22 ರಿಂದ 2025-26 ಸಾಲಿನವರೆಗೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಗೊಂಡ ಅನುದಾನದಲ್ಲಿ ಭಾರೀ ಮಟ್ಟದ ಅಕ್ರಮಗಳು ಹಾಗೂ ದುರುಪಯೋಗ ನಡೆದಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವಾರು ಕಾಮಗಾರಿಗಳು ಕ್ರಿಯಾ ಯೋಜನೆಯಲ್ಲಿ ಸೇರಿದ್ದರೂ ಕಾರ್ಯಗತವಾಗಿಲ್ಲ. ಕೆಲವು ಕಾಮಗಾರಿಗಳನ್ನು ಕಳಪೆ ಗುಣಮಟ್ಟದ ವಸ್ತುಗಳಿಂದ ನಿರ್ಮಿಸಲಾಗಿದ್ದು, ಸಾರ್ವಜನಿಕ ಹಣದ ದುರ್ನಿಯೋಗ ನಡೆದಿದೆ ಎಂದು ಅವರು ದೂರಿದರು. ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಂಚು ಮೂಲಕ ಈ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಕೇಳಿದರೂ ಸರಿಯಾದ ಮಾಹಿತಿ ನೀಡದೆ ವಿಷಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಹಲವು ಬಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ರಾಜ್ಯ ಹಣಕಾಸು ಯೋಜನೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಷ್ಟ ಉತ್ತರ ನೀಡದೆ ತಪ್ಪಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಈ ಹಿನ್ನೆಲೆಯಲ್ಲಿ ಎಲ್ಲಾ ಕಾಮಗಾರಿಗಳ ಕುರಿತು ಲೋಕಾಯುಕ್ತರಿಂದ ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ, ಕೆಲಸ ಮಾಡದೆ ಹಣ ಪಡೆದಿರುವವರು ಹಾಗೂ ಕಳಪೆ ಕಾಮಗಾರಿಗಳಿಗೆ ಕಾರಣರಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮನವಿಗೆ ತಕ್ಷಣ ಸ್ಪಂದಿಸದಿದ್ದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ತೀವ್ರಗೊಳಿಸಿ ಬೃಹತ್ ಪ್ರತಿಭಟನೆ ಹಾಗೂ ಕಾನೂನುಬದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬೆಸೆಜ್ ರೆಡ್ಡಿ, ಬಿಜೆಪಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಿ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿಗಳಾದ ತಿಪ್ಪೆರುದ್ರ, ಬಸವರಾಜು, ಕಿರಾಣಿ ಬಾಬು, ಲತಾ, ವಿದ್ಯಾ ಸೈಕಲ್ ಶಾಪ್ ವೀರಭದ್ರಗೌಡ, ನೀಲಗಲು ಬಸವರಾಜು, ರವೀಂದ್ರ ರೆಡ್ಡಿ, ಪುರುಷೋತ್ತಮ್, ಸುರೇಶ್, ಲಕ್ಷ್ಮಣ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments