Saturday, April 11, 2026
HomeDistrictsBengaluru Cityಬೇಸಿಗೆಯ ಬಿಸಿ ತಾಪಕ್ಕೆ ತತ್ತರಿಸುತ್ತಿರುವ ಸಂಚಾರ ಪೊಲೀಸರು – ಮೂಲಸೌಕರ್ಯ ಒದಗಿಸಲು ಡಿಜಿಪಿಗೆ ಮನವಿ

ಬೇಸಿಗೆಯ ಬಿಸಿ ತಾಪಕ್ಕೆ ತತ್ತರಿಸುತ್ತಿರುವ ಸಂಚಾರ ಪೊಲೀಸರು – ಮೂಲಸೌಕರ್ಯ ಒದಗಿಸಲು ಡಿಜಿಪಿಗೆ ಮನವಿ

ಬೆಂಗಳೂರು, ಮಾರ್ಚ್ 10: ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಉಷ್ಣಾಂಶ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸ್ ಸಿಬ್ಬಂದಿಗಳ ಸಂಕಷ್ಟ ಗಂಭೀರ ರೂಪ ಪಡೆದುಕೊಂಡಿದ್ದು, ಅವರ ಆರೋಗ್ಯ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯದ ಡಿಜಿಪಿಗೆ ಮನವಿ ಮಾಡಿದ್ದಾರೆ.

ರಾಜ್ಯದಾದ್ಯಂತ ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆ, ಬಿಸಿಲಿನ ತಾಪಮಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳು ಅತ್ಯಂತ ಕಠಿಣ ಪರಿಸರದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಿಶೇಷವಾಗಿ ಸಂಚಾರ ನಿಯಂತ್ರಣದ ಜವಾಬ್ದಾರಿ ಹೊತ್ತಿರುವ ಪೊಲೀಸರು ನಗರದ ಪ್ರಮುಖ ಸಿಗ್ನಲ್‌ಗಳಲ್ಲಿ ನೆರಳಿಲ್ಲದೆ ನಿಂತು, ಬಿಸಿಲಿನ ತಾಪ ಮತ್ತು ವಾಹನಗಳಿಂದ ಹೊರಸೂಸುವ ವಿಷಕಾರಿ ಹೊಗೆ ನಡುವೆಯೇ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು, ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳಿಂದಾಗಿ ಗಾಳಿಯಲ್ಲಿ ಧೂಳು ಪ್ರಮಾಣ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರಷ್ಟೇ ಅಲ್ಲದೆ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೂ ಉಸಿರಾಟದ ಸಮಸ್ಯೆಗಳು, ಡಸ್ಟ್ ಅಲರ್ಜಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವುದು ಗಮನಾರ್ಹವಾಗಿದೆ.

ಬಿಸಿಲಿನ ತೀವ್ರತೆಯಿಂದ ಬೆವರುತುಂಬಿದ ಸಮವಸ್ತ್ರ, ಬಾಡಿದ ಮುಖಗಳು, ದೇಹದ ನೀರಿನ ಕೊರತೆ (ಡಿಹೈಡ್ರೇಷನ್) ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಪೊಲೀಸರು, ಕೆಲವೊಮ್ಮೆ ಕಟ್ಟಡಗಳ ನೆರಳು, ಮರಗಳ ಆಸರೆ ಅಥವಾ ನಿಂತ ವಾಹನಗಳ ನೆರಳನ್ನು ಆಶ್ರಯಿಸಬೇಕಾದ ದುಸ್ಥಿತಿಯಲ್ಲಿದ್ದಾರೆ. ಈ ದೃಶ್ಯ ಸಾರ್ವಜನಿಕರ ಮನಸ್ಸು ಕಲಕುವಂತಿದೆ.

ಈ ಹಿನ್ನಲೆಯಲ್ಲಿ, ಸಂಚಾರ ಪೊಲೀಸ್ ಸಿಬ್ಬಂದಿಗಳಿಗೆ ತಕ್ಷಣವೇ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ಒತ್ತಿ ಹೇಳಲಾಗಿದೆ. ಕರ್ತವ್ಯ ನಿರ್ವಹಿಸುವ ಸಿಗ್ನಲ್‌ಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಪ್ಯಾರಾಚೂಟ್ ಕೊಡೆಗಳನ್ನು ಅಳವಡಿಸುವುದು, ಉತ್ತಮ ಗುಣಮಟ್ಟದ ಮಾಸ್ಕ್‌ಗಳನ್ನು ಪೂರೈಸುವುದು, ಹಾಗೂ ನಿರ್ಜಲೀಕರಣ ತಪ್ಪಿಸಲು ಶುದ್ಧ ಕುಡಿಯುವ ನೀರು ಮತ್ತು ಎಲೆಕ್ಟ್ರೋಲೈಟ್ ಪಾನೀಯಗಳನ್ನು ನಿಯಮಿತವಾಗಿ ಒದಗಿಸುವಂತೆ ಮನವಿ ಮಾಡಲಾಗಿದೆ.

ಇದಲ್ಲದೆ, ಬೇಸಿಗೆ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿಗಳ ಕೆಲಸದ ಪರಿಸ್ಥಿತಿಯನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಿ, ಅವರ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಸಾಮಾಜಿಕ ಹೊಣೆಗಾರಿಕೆಯಿಂದ ಸಾರ್ವಜನಿಕರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳ ಕಲ್ಯಾಣದತ್ತ ಸರ್ಕಾರ ಗಮನ ಹರಿಸುವ ಅಗತ್ಯ ಇಂದಿನ ತುರ್ತು ಅವಶ್ಯಕತೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments