ವರದಿ : ಜಿ ಎಂ ಬಸಯ್ಯಸ್ವಾಮಿ
ಕುರುಗೋಡು: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026–2031ನೇ ಸಾಲಿನ ನಿರ್ದೇಶಕರ ಚುನಾವಣೆಯು ಏಪ್ರಿಲ್ 19 ರಂದು ಕುರುಗೋಡು ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ನಡೆಯಲಿದೆ.
ಈ ಚುನಾವಣೆಗೆ ಸಂಬಂಧಿಸಿದಂತೆ ಹಿತರಕ್ಷಣಾ ವೇದಿಕೆ ತಂಡದ ವತಿಯಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜರುಗಿತು. ಶಿಕ್ಷಕರಾದ ಸಿ. ನಿಂಗಪ್ಪ, ಗುಂಡಪ್ಪನವರ ನಾಗರಾಜ, ತುಕಾರಾಮ ಗೊರವ, ಶಿವಶಂಕರ ಜಿ, ಶೇಖಾವಲಿ ಪಿ ಅವರು ಸಾಮಾನ್ಯ ವರ್ಗದಲ್ಲಿ ಹಾಗೂ ಮಹಿಳಾ ಮೀಸಲಾತಿಯಲ್ಲಿ ಶಾಂತಕುಮಾರಿ, ನುಸ್ರತ್ ಉನ್ನಿಸಾ, ಪಾರ್ವತಮ್ಮ ಕೆ ಅವರು ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಮಾರು 135 ಕ್ಕೂ ಹೆಚ್ಚು ಶಿಕ್ಷಕರು ಉಪಸ್ಥಿತರಿದ್ದು, ಚುನಾವಣೆ ಅಧಿಕಾರಿ ಡಿ.ಎಂ. ಮಲ್ಲಿಕಾರ್ಜುನ ಹಾಗೂ ಸಹಾಯಕ ಚುನಾವಣಾಧಿಕಾರಿ ಚಿನ್ನಬೋರನಾಯಕ್ ಅವರಿಗೆ ನಾಮಪತ್ರಗಳನ್ನು ಹಸ್ತಾಂತರಿಸಲಾಯಿತು.
ಚುನಾವಣೆ ಪ್ರಕ್ರಿಯೆ ಏಪ್ರಿಲ್ 19 ರಂದು ಬೆಳಿಗ್ಗೆ 9.00 ರಿಂದ ಸಂಜೆ 5.00 ಗಂಟೆಯವರೆಗೆ ನಡೆಯಲಿದ್ದು, ಬಳಿಕ ಮತ ಎಣಿಕೆ ಕಾರ್ಯ ಕೈಗೊಳ್ಳಲಾಗುತ್ತದೆ. ಅದೇ ದಿನ ಸಂಜೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಡಿ.ಎಂ. ಮಲ್ಲಿಕಾರ್ಜುನ ಮಾಹಿತಿ ನೀಡಿದರು.
