ಬಳ್ಳಾರಿ,ಜೂ.02:ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಹಲವೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಸಾಗರೋತ್ತರ ವೇಗವನ್ನು ಪಡೆದುಕೊಂಡಿದ್ದು, ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ಲಭ್ಯವಿರುವ ಉತ್ತಮ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ತಮ್ಮ ಕೃಷಿ ಭೂಮಿಯನ್ನು ಹದಗೊಳಿಸುವ ಕಾರ್ಯಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ರಂಟೆ-ಕುAಟೆ ಹೊಡೆಯುವುದು, ರೋಟವೇಟರ್ ಹಾಗೂ ಎತ್ತುಗಳ ನೇಗಿಲು ಬಳಸಿ ಭೂಮಿಯನ್ನು ಹದಗೊಳಿಸುವ ದೃಶ್ಯಗಳು ಜಿಲ್ಲೆಯಾದ್ಯಂತ ಸಾಮಾನ್ಯವಾಗುತ್ತಿವೆ.
ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆಯು 599.0 ಮಿ.ಮೀ ಆಗಿರುತ್ತದೆ. ಮೇ 31ರ ಅಂತ್ಯಕ್ಕೆ ಸರಾಸರಿ ವಾಡಿಕೆ ಮಳೆಯು 74.4 ಮಿ.ಮೀ ಇರಬೇಕಾಗಿದ್ದು, ಪ್ರಸ್ತುತ 72.4 ಮಿ.ಮೀ ನಷ್ಟು ಉತ್ತಮ ಮಳೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ. ಸೋಮಸುಂದರ್ ಅವರು ತಿಳಿಸಿದ್ದಾರೆ.
1.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ:
ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 1,59,546 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಲಾಗಿದೆ. ಪ್ರಮುಖ ಬೆಳೆಗಳ ನಿರೀಕ್ಷಿತ ಬಿತ್ತನೆ ವಿಸ್ತೀರ್ಣದ ವಿವರ ಹೀಗಿದೆ.
ಭತ್ತ- 87,741 ಹೆಕ್ಟೇರ್, ಮೆಕ್ಕಜೋಳ-26,000 ಹೆಕ್ಟೇರ್, ಹತ್ತಿ- 20,000 ಹೆಕ್ಟೇರ್, ಸಜ್ಜೆ- 10,000 ಹೆಕ್ಟೇರ್, ತೊಗರಿ- 7,224 ಹೆಕ್ಟೇರ್, ತೃಣಧಾನ್ಯಗಳು- 2,508 ಹೆಕ್ಟೇರ್, ಶೇಂಗಾ (ನೆಲಕಡಲೆ)- 1,500 ಹೆಕ್ಟೇರ್, ಸೂರ್ಯಕಾಂತಿ- 1,200 ಹೆಕ್ಟೇರ್, ಕಬ್ಬು- 800 ಹೆಕ್ಟೇರ್.
15 ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಬೀಜ ವಿತರಣೆ:
ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸಲು ಸಂಪೂರ್ಣ ಸಜ್ಜಾಗಿದೆ. ಜಿಲ್ಲೆಯ 13 ರೈತ ಸಂಪರ್ಕ ಕೇಂದ್ರಗಳು ಮತ್ತು 02 ಹೆಚ್ಚುವರಿ ಕೇಂದ್ರಗಳು ಸೇರಿದಂತೆ ಒಟ್ಟು 15 ಕೇಂದ್ರಗಳ ಮೂಲಕ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ ಮುಂಗಾರು ಹಂಗಾಮಿನಲ್ಲಿ ಒಟ್ಟು 7,115 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಸದ್ಯ 10,415 ಕ್ವಿಂಟಾಲ್‌ನಷ್ಟು ದೊಡ್ಡ ಪ್ರಮಾಣದ ದಾಸ್ತಾನು ಲಭ್ಯವಿದೆ.
ಬಿತ್ತನೆ ಬೀಜಗಳ ಬೇಡಿಕೆ ಮತ್ತು ದಾಸ್ತಾನು ವಿವರ (ಕ್ವಿಂ. ಗಳಲ್ಲಿ):
ಭತ್ತ: 2,003 ಕ್ವಿಂ(ಬೇಡಿಕೆ), 3,000 ಕ್ವಿಂ(ದಾಸ್ತಾನು).
ಮೆಕ್ಕಜೋಳ: 2,493 ಕ್ವಿಂ(ಬೇಡಿಕೆ), 3,000 ಕ್ವಿಂ(ದಾಸ್ತಾನು).
ತೊಗರಿ: 477 ಕ್ವಿಂ(ಬೇಡಿಕೆ), 1,000 ಕ್ವಿಂ(ದಾಸ್ತಾನು).
ನೆಲಕಡಲೆ: 1,770 ಕ್ವಿಂ(ಬೇಡಿಕೆ), 2,900 ಕ್ವಿಂ(ದಾಸ್ತಾನು).
ಜೋಳ: 96 ಕ್ವಿಂ(ಬೇಡಿಕೆ), 150 ಕ್ವಿಂ(ದಾಸ್ತಾನು).
ಇತರೆ: 276 ಕ್ವಿಂ(ಬೇಡಿಕೆ), 365 ಕ್ವಿಂ(ದಾಸ್ತಾನು).
ಒಟ್ಟು: 7,115 ಕ್ವಿಂ(ಬೇಡಿಕೆ), 10,415 ಕ್ವಿಂ(ದಾಸ್ತಾನು).
ರೈತ ಬಾಂಧವರು ಕೇವಲ ಮಣ್ಣಿನಲ್ಲಿ ಅವಶ್ಯಕ ತೇವಾಂಶ ಲಭ್ಯವಿದ್ದಾಗ ಹಾಗೂ ಮುಂದಿನ 3-4 ದಿನಗಳಲ್ಲಿ ಮಳೆ ಬರುವ ಮುನ್ಸೂಚನೆ ಇರುವ ಸಂಭವವಿದ್ದಲ್ಲಿ ಮಾತ್ರ ಬಿತ್ತನೆಗೆ ಮುಂದಾಗಬೇಕು ಎಂದು ಅವರು ಕೋರಿದ್ದಾರೆ.
ಸಮರ್ಪಕ ರಸಗೊಬ್ಬರ ದಾಸ್ತಾನು; ಎಫ್‌ಐಡಿ ಮೂಲಕ ಯೂರಿಯಾ ವಿತರಣೆ:
ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಮರ್ಪಕವಾಗಿದೆ. ಮುಂಗಾರು ಹಂಗಾಮಿಗೆ ಒಟ್ಟು 1,03,778 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಸದ್ಯ 47,533.23 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿರುತ್ತದೆ.
ಪಾಶ್ಚಾತ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ರಸಗೊಬ್ಬರದ ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ಏರುಪೇರಾಗುವ ಸಂಭವವಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೈತರಿಗೆ ಯೂರಿಯಾ ರಸಗೊಬ್ಬರವನ್ನು ಸಮರ್ಪಕವಾಗಿ ಒದಗಿಸಲು ಹಾಗೂ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟಲು ಸರ್ಕಾರದ ಆದೇಶದನ್ವಯ ಯೂರಿಯಾವನ್ನು ಕಡ್ಡಾಯವಾಗಿ ಎಫ್‌ಐಡಿ (ಫಾರ್ಮರ್ ಐಡಿ) ಮೂಲಕವೇ ವಿತರಿಸಲಾಗುವುದು.
ಅಲ್ಲದೆ, ರೈತರು ಕೇವಲ ಯೂರಿಯಾ ರಸಗೊಬ್ಬರ ಒಂದನ್ನೇ ಅವಲಂಬಿಸದೆ ಸಾರಜನಕ ಒದಗಿಸುವ ಇತರೆ ರಸಗೊಬ್ಬರಗಳಾದ ಕಾಂಪ್ಲೆಕ್ಸ್ ಗೊಬ್ಬರಗಳು, ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿ.ಎ.ಪಿ ಗಳನ್ನೂ ಸಹ ಬಳಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
ರಸಗೊಬ್ಬರ ಬೇಡಿಕೆ (ಏಪ್ರಿಲ್ 2026 ರಿಂದ ಸೆಪ್ಟೆಂಬರ್ 2026 ರವರೆಗೆ) ಮತ್ತು ದಾಸ್ತಾನು ವಿವರ (ಮೇ 31 2026 ರವರೆಗೆ) (ಮೆಟ್ರಿಕ್ ಟನ್‌ಗಳಲ್ಲಿ):
ಡಿ.ಎ.ಪಿ: 13,915(ಬೇಡಿಕೆ), 6,093.72(ದಾಸ್ತಾನು).
ಎಂ.ಒ.ಪಿ: 3,567(ಬೇಡಿಕೆ), 2,156.10(ದಾಸ್ತಾನು).
ಕಾಂಪ್ಲೆಕ್ಸ್: 50,554(ಬೇಡಿಕೆ), 25,029.54(ದಾಸ್ತಾನು).
ಯೂರಿಯಾ: 34,641(ಬೇಡಿಕೆ), 13,633.40(ದಾಸ್ತಾನು)
ಎಸ್.ಎಸ್.ಪಿ/ಇತರೆ: 1,101(ಬೇಡಿಕೆ), 599.52(ದಾಸ್ತಾನು)
ಒಟ್ಟು: 1,03,778(ಬೇಡಿಕೆ), 47,533.23(ದಾಸ್ತಾನು).
ಅಕ್ರಮ ತಡೆಗೆ ಕಟ್ಟುನಿಟ್ಟಿನ ನಿಗಾ:
ಜಿಲ್ಲೆಯಲ್ಲಿ ಕೃಷಿ ಪರಿಕರಗಳ ಪರಿವೀಕ್ಷಕರ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಗುಣಮಟ್ಟ ಮತ್ತು ಬೆಲೆ ನಿಯಂತ್ರಣದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ.
ಖಾಸಗಿ ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನೇ ಮಾರಾಟ ಮಾಡಬೇಕು ಹಾಗೂ ಯೂರಿಯಾವನ್ನು ಎಫ್‌ಐಡಿ ಮೂಲಕವೇ ವಿತರಿಸಬೇಕು. ನಿಯಮ ಉಲ್ಲಂಘಿಸಿ ಕಾಳಸಂತೆ ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿದರೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಎಚ್ಚರಿಸಿದ್ದಾರೆ.
ರೈತರು ಸಹ ಯಾವುದೇ ಅನಧಿಕೃತ ಮೂಲಗಳಿಂದ ಪರಿಕರಗಳನ್ನು ಖರೀದಿಸದೇ, ಕೇವಲ ಅಧಿಕೃತ ಪರಿಕರ ಮಾರಾಟಗಾರರಿಂದಲೇ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
