Saturday, June 20, 2026
HomeSandurಕ್ರೀಡಾಸ್ಫೂರ್ತಿಯಿಂದ ಯಶಸ್ಸಿನ ಹಾದಿ ನಿರ್ಮಿಸಿ: ಡಾ. ಎಚ್. ಕೊಟ್ರೇಶ್

ಕ್ರೀಡಾಸ್ಫೂರ್ತಿಯಿಂದ ಯಶಸ್ಸಿನ ಹಾದಿ ನಿರ್ಮಿಸಿ: ಡಾ. ಎಚ್. ಕೊಟ್ರೇಶ್

ಸಂಡೂರು, ಜೂನ್ 20: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡಬೇಕು ಎಂದು ಡಾ. ಎಚ್. ಕೊಟ್ರೇಶ್ ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ವಾರ್ಷಿಕ ಕ್ರೀಡಾ ಚಟುವಟಿಕೆಗಳ ಅಂಗವಾಗಿ ಆಯೋಜಿಸಲಾದ ಡೈರೆಕ್ಟರ್ ಕಪ್-2026 ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ರೂಪಿಸುವಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ಕ್ರೀಡಾಂಗಣದಲ್ಲಿ ಕಲಿಯುವ ಅನೇಕ ಮೌಲ್ಯಗಳು ಜೀವನದ ವಿವಿಧ ಹಂತಗಳಲ್ಲಿ ಯಶಸ್ಸು ಸಾಧಿಸಲು ನೆರವಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಶಶಿಧರ್ ಕೆಲ್ಲೂರ್ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿದಿನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಸದೃಢತೆ ಕೂಡ ವೃದ್ಧಿಯಾಗುತ್ತದೆ. ಕ್ರೀಡೆಗಳು ಒತ್ತಡ ನಿವಾರಣೆಗೆ ಸಹಕಾರಿ ಆಗಿದ್ದು, ತಂಡದ ಮನೋಭಾವ ಮತ್ತು ಸಹಕಾರದ ಗುಣಗಳನ್ನು ಬೆಳೆಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ತಿಪ್ಪೇಸ್ವಾಮಿ ಮಾತನಾಡಿ, ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿವೆ ಎಂದರು. ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಜೊತೆಗೆ ಜೀವನದಲ್ಲಿ ಗುರಿ ಸಾಧಿಸುವ ದೃಢ ಸಂಕಲ್ಪವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ಆರೋಗ್ಯ ಜಾಗೃತಿ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಡೈರೆಕ್ಟರ್ ಕಪ್-2026ರ ಅಂಗವಾಗಿ ಅಥ್ಲೆಟಿಕ್ಸ್, ವಾಲಿಬಾಲ್, ಕಬ್ಬಡ್ಡಿ, ಖೋ-ಖೋ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ನಡೆಯಲಿವೆ. ಈ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಕಾರ್ಯಕ್ರಮದ ನಿರೂಪಣೆಯನ್ನು ಡಾ. ಹೊನ್ನೂರಪ್ಪ ನಿರ್ವಹಿಸಿದರು. ಡಾ. ನರಸಿಂಹಮೂರ್ತಿ ಸ್ವಾಗತಿಸಿ, ಡಾ. ವಿರೂಪಾಕ್ಷಪ್ಪ ವಂದಿಸಿದರು.

ಈ ಸಂದರ್ಭದಲ್ಲಿ ಕ್ರೀಡಾ ನಿರ್ದೇಶಕರಾದ ಶಿವರಾಮಪ್ಪ ರಾಗಿ, ಕ್ರೀಡಾ ಸಹಾಯಕರಾದ ಪಾಪಯ್ಯ, ವಿವಿಧ ವಿಭಾಗಗಳ ಸಂಯೋಜಕರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments