[ ವರದಿ : ಶಿವರಾಜ್ ಕನ್ನಡಿಗ ]
ಕೊಟ್ಟೂರು: ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಅತ್ಯುತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ದಾನಿಗಳು ಹಾಗೂ ನಿವೃತ್ತ ಪ್ರಾಧ್ಯಾಪಕ ಟಿ. ಸತೀಶ್ ಪ್ರತಿಪಾದಿಸಿದರು.
ಸ್ಥಳೀಯ ಶ್ರೀ ಗುರುಬಸವೇಶ್ವರ ಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ‘ತುಂಬರಗುದ್ಧಿ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸಂಸ್ಕಾರಯುತ ಶಿಕ್ಷಣವೇ ಯಶಸ್ಸಿನ ದಾರಿ:
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಕೇವಲ ಅಂಕ ಗಳಿಕೆಯಷ್ಟೇ ಜೀವನವಲ್ಲ. ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಮಾತ್ರ ನಾವು ಪಡೆಯುವ ಪದವಿಗೆ ನಿಜವಾದ ಮೌಲ್ಯ ಮತ್ತು ಅರ್ಥ ಸಿಗುತ್ತದೆ. ಸರ್ಕಾರ ನೀಡುವ ಸೌಲಭ್ಯಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ನೀಡುವ ಪ್ರೋತ್ಸಾಹವನ್ನು ಧನಾತ್ಮಕವಾಗಿ ಬಳಸಿಕೊಂಡು, ಕಠಿಣ ಪರಿಶ್ರಮದ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು” ಎಂದು ಪ್ರೇರಣಾದಾಯಿ ಕಿವಿಮಾತು ಹೇಳಿದರು.
ಪ್ರಶಂಸನೀಯ ಸೇವಾ ಕಾರ್ಯ:
ಸಮಾರಂಭದಲ್ಲಿ ಭಾಗವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕಿ ಎಸ್.ಎಂ. ನಳಿನಿ ಅವರು ಮಾತನಾಡಿ, ಕಳೆದ 13 ವರ್ಷಗಳಿಂದ ನಿರಂತರವಾಗಿ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸುತ್ತಾ, ಶೈಕ್ಷಣಿಕ ಬೆಳವಣಿಗೆಗೆ ನೆರವಾಗುತ್ತಿರುವ ಟ್ರಸ್ಟ್ ಅಧ್ಯಕ್ಷ ಸತೀಶ್ ಅವರ ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ತಿಪ್ಪಮ್ಮ ಸೇರಿದಂತೆ ಹಲವು ಗಣ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
