ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ 114 ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಹಳ್ಳಿ ಗ್ರಾಮದ ಕೆರೆಯಲ್ಲಿ VB-G RAM G ಯೋಜನೆಯಡಿ ನಡೆಯುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲಿಸಿದರು.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ NMMS ಹಾಜರಾತಿಯನ್ನು ಪರಿಶೀಲಿಸಲಾಗಿದ್ದು, 108 ಕೂಲಿ ಕಾರ್ಮಿಕರು ಕಾಮಗಾರಿಯಲ್ಲಿ ಅಚ್ಚುಕಟ್ಟಾಗಿ ತೊಡಗಿಸಿಕೊಂಡಿರುವುದು ಕಂಡುಬಂದಿತು. ಕಾರ್ಮಿಕರಿಗೆ ಇದೇ ರೀತಿಯಲ್ಲಿ ಶಿಸ್ತುಬದ್ಧವಾಗಿ ಹಾಗೂ ಗುಣಮಟ್ಟದಿಂದ ಕೆಲಸ ನಿರ್ವಹಿಸುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೂಲಿ ಕಾರ್ಮಿಕ ಅಂಜಿನಪ್ಪ, “VB-G RAM G ಯೋಜನೆಯಡಿ ಸ್ಥಳೀಯವಾಗಿ ನಿರಂತರವಾಗಿ ಕೆಲಸ ನೀಡುತ್ತಿರುವುದರಿಂದ ಗುಳೆ ಹೋಗುವುದು ತಪ್ಪಿದೆ. ನಮಗೆ ಕೂಲಿ ಕೆಲಸ ದೊರೆತಿದ್ದು, ಇದರಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಕೂಲಿ ಕಾರ್ಮಿಕರಾದ ಸಿದ್ದಮ್ಮ ಹಾಗೂ ಮಲ್ಲೇಶಪ್ಪ ಮಾತನಾಡಿ, “ಸ್ಥಳೀಯವಾಗಿ ನಮಗೆ 125 ದಿನಗಳವರೆಗೆ ಕೆಲಸ ನೀಡಲಾಗುತ್ತಿದ್ದು, ದಿನಕ್ಕೆ ₹382 ಕೂಲಿ ದೊರೆಯುತ್ತಿದೆ. ನಮ್ಮ ಕೂಲಿ ವೇತನವನ್ನು ಸಕಾಲಕ್ಕೆ ಪಾವತಿಸಬೇಕು” ಎಂದು ಮನವಿ ಮಾಡಿದರು.
ಮನೆ ಮನೆಗೆ ತೆರಳಿ ಜಾಬ್ ಕಾರ್ಡ್ ಮೇಳ:
ಆಗಸ್ಟ್ 15ರಿಂದ ಸೆಪ್ಟೆಂಬರ್ವರೆಗೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಮೂಲಕ ಮನೆ ಮನೆಗೆ ಭೇಟಿ ನೀಡಿ VB-G RAM G ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಹೊಸ ಜಾಬ್ ಕಾರ್ಡ್ ಪಡೆಯಲು ನಮೂನೆ–1ರಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಲಾಗುತ್ತಿದೆ.
ಯೋಜನೆಯಡಿ ಲಭ್ಯವಿರುವ 318 ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿ, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದರು.
6,788 ಕಾರ್ಮಿಕರಿಗೆ ಉದ್ಯೋಗ:
ಜುಲೈ 1ರಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಒಟ್ಟು 6,788 VB-G RAM G ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ. ಇವರಲ್ಲಿ 4,314 ಮಹಿಳೆಯರು ಹಾಗೂ 2,474 ಪುರುಷರು ಸೇರಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಡಣಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಸಿಬ್ಬಂದಿಗೆ ಭೀಮೇಶ್ ಅವರು ಧನ್ಯವಾದಗಳನ್ನು ಸಲ್ಲಿಸಿದರು.
ಕಾಮಗಾರಿ ಸ್ಥಳದಲ್ಲಿ ಗಂಗೆ ಪೂಜೆ ನೆರವೇರಿಸಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಡಣಾಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ. ನಾಗರಾಜ್, ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ಹೆಚ್. ನಾಗರಾಜ್, ಬಿಎಫ್ಟಿ ಶಿವಾನಂದ, ಜಿಕೆಎಂ ಮಂಜುಳಾ, ಕಾಯಕಬಂಧುಗಳಾದ ದುಗಮ್ಮ, ಭೀಮೇಶ್ ಹಾಗೂ ನಿಂಗಮ್ಮ ಸೇರಿದಂತೆ VB-G RAM G ಯೋಜನೆಯ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
