ಬಳ್ಳಾರಿ,ಸೆ.11: ಕುರುಗೋಡು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಚಿ ಯೋಜನೆಯಡಿ ‘ನನ್ನ ಮೈತ್ರಿ ಋತು ಶಾಲಾ ಹಲೋ ಮೈತ್ರಿ ಕ್ಯಾಂಪ್’ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಯಿತು.
ಭಾರತ ಮತ್ತು ಕರ್ನಾಟಕ ಸರ್ಕಾರ, ರಾಷ್ಟಿçÃಯ ಆರೋಗ್ಯ ಅಭಿಯಾನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರಿನ ‘ಅನ್‌ಇನ್ಹಿಬಿಟೆಡ್’ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಕುರುಗೋಡು ಸಮುದಾಯ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಸ್ನೇಹಾ ಕ್ಲಿನಿಕ್ ಹಾಗೂ ಓರ್ವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹದಿಹರೆಯದ ಕಿಶೋರಿಯರಿಗೆ ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಸಮಗ್ರ ಅರಿವು ಮೂಡಿಸಲಾಯಿತು.
ಅನ್‌ಇನ್ಹಿಬಿಟೆಡ್ ಸಂಸ್ಥೆಯ ಪ್ರಗತಿ ಸುಧಾಕರ್ ಹಾಗೂ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮುಖ್ಯಸ್ಥ ಸಿಬಿ ಸಂಕವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿ, ‘ಗ್ರಾಮೀಣ ಭಾಗದ ಹದಿಹರೆಯದವರಲ್ಲಿ ಹಾಗೂ ಪೋಷಕರಲ್ಲಿ ಮುಟ್ಟಿನ ಬಗ್ಗೆ ಇರುವ ತಾರತಮ್ಯ, ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳನ್ನು ತೊಡೆದುಹಾಕುವುದು ಇಂದಿನ ಅಗತ್ಯವಾಗಿದೆ. ಹೆಣ್ಣುಮಕ್ಕಳಲ್ಲಿ ಗರ್ಭಕೋಶದ ಸಮಸ್ಯೆ, ಬಿಳಿ ಮುಟ್ಟು, ಮುಟ್ಟಿನ ಸಂದರ್ಭದ ನೋವು ಸೇರಿದಂತೆ ಹಲವು ಗೊಂದಲಗಳ ಪರಿಹಾರಕ್ಕೆ ‘ಹಲೋ ಮೈತ್ರಿ ಸಹಾಯವಾಣಿ’ (08047104234) ಉತ್ತಮ ಸೇತುವೆಯಾಗಿದೆ’ ಎಂದರು.
ಗಂಡು ಮಕ್ಕಳಲ್ಲಿ ಹದಿಹರೆಯದಲ್ಲಿ ಉಂಟಾಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಕುರಿತ ಗೊಂದಲಗಳಿಗೂ ಈ ಸಹಾಯವಾಣಿ ಹಾಗೂ ಕುರುಗೋಡಿನ ‘ಸ್ನೇಹಾ ಕ್ಲಿನಿಕ್’ ಮೂಲಕ ಉಚಿತ ಆಪ್ತಸಮಾಲೋಚನೆ ಮತ್ತು ಸೇವೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಆರ್.ಕೆ.ಎಸ್.ಕೆ. ಸಂಯೋಜಕ ಕೆ.ಎನ್.ಎಮ್. ಮನೋಹರ್, ಅನ್‌ಇನ್ಹಿಬಿಟೆಡ್ ಸಂಸ್ಥೆಯ ‘ಪೀರಿಯಡ್ ಫೆಲೋ’ ಕುಮಾರಿ ಲಕ್ಷಿö್ಮದೇವಿ, ಶಾಲೆಯ ಮುಖ್ಯಗುರು ಡಿ.ಎಮ್. ಮಲ್ಲಿಕಾರ್ಜುನ, ಸ್ನೇಹಾ ಕ್ಲಿನಿಕ್ ಆಪ್ತಸಮಾಲೋಚಕ ಮಹಬೂಬ್ ಭಾಷಾ, ಶಾಲಾ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
