Tuesday, September 22, 2026
HomeDistrictsChitradurgaಬಾಲ್ಯ ವಿವಾಹ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು: ಎ.ಕೆ. ತಿಮ್ಮಪ್ಪ

ಬಾಲ್ಯ ವಿವಾಹ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು: ಎ.ಕೆ. ತಿಮ್ಮಪ್ಪ

[ವರದಿ : ಭಟ್ರಹಳ್ಳಿ ಧನಂಜಯ]
ಮೊಳಕಾಲ್ಮೂರು: ಆಶ್ರಿತ ಸಂಸ್ಥೆ (ರಿ.), ಚಿತ್ರದುರ್ಗ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘ, ಮೊಳಕಾಲ್ಮೂರು ಇವರ ಸಹಯೋಗದಲ್ಲಿ ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನದ ಅಂಗವಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೆ. ತಿಮ್ಮಪ್ಪ, ಬಾಲ್ಯ ವಿವಾಹವು ಮಕ್ಕಳ ಬಾಲ್ಯ, ಶಿಕ್ಷಣ, ಆರೋಗ್ಯ ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಯಾಗಿದೆ. ಬಾಲ್ಯ ವಿವಾಹ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಹಾಗೂ ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಪೋಷಕರು ಮತ್ತು ಸಮಾಜದ ಜವಾಬ್ದಾರಿಯಾಗಿದೆ. ಬಾಲ್ಯದಲ್ಲಿಯೇ ವಿವಾಹ ಮಾಡುವುದರಿಂದ ಮಕ್ಕಳ ಶಿಕ್ಷಣ ಮೊಟಕುಗೊಳ್ಳುವುದಲ್ಲದೆ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006ರ ಪ್ರಕಾರ, ಹೆಣ್ಣುಮಕ್ಕಳಿಗೆ 18 ವರ್ಷ ಹಾಗೂ ಗಂಡುಮಕ್ಕಳಿಗೆ 21 ವರ್ಷ ಪೂರ್ಣಗೊಳ್ಳುವ ಮೊದಲು ನಡೆಯುವ ವಿವಾಹವನ್ನು ಬಾಲ್ಯ ವಿವಾಹವೆಂದು ಪರಿಗಣಿಸಲಾಗುತ್ತದೆ. ಇಂತಹ ವಿವಾಹಗಳನ್ನು ತಡೆಯಲು ಕಾನೂನು ಕ್ರಮಗಳಿದ್ದು, ಬಾಲ್ಯ ವಿವಾಹಕ್ಕೆ ಸಹಕರಿಸುವ ಅಥವಾ ಪ್ರೋತ್ಸಾಹಿಸುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಎ.ಕೆ. ತಿಮ್ಮಪ್ಪ ಹೇಳಿದರು.

ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡುಬಂದರೆ ಅದನ್ನು ಕುಟುಂಬದ ವೈಯಕ್ತಿಕ ವಿಚಾರವೆಂದು ನಿರ್ಲಕ್ಷಿಸದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದರು.

ಮಕ್ಕಳಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸುವುದು ಅತ್ಯಂತ ಮುಖ್ಯ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜೊತೆಗೆ, ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಬಾಲ್ಯ ವಿವಾಹದಿಂದ ಉಂಟಾಗುವ ಕಾನೂನು ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ಪೋಷಕರಿಗೆ ನಿರಂತರವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಪೋಷಕರು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಹಾಗೂ ಉತ್ತಮ ಭವಿಷ್ಯ ದೊರೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಎ.ಕೆ. ತಿಮ್ಮಪ್ಪ ಹೇಳಿದರು.

ಈ ಸಂದರ್ಭದಲ್ಲಿ ಆಶ್ರಿತ ಸಂಸ್ಥೆಯ ತಾಲೂಕು ಸಂಯೋಜಕ ಭಟ್ರಹಳ್ಳಿ ಧನಂಜಯ, ವಕೀಲರ ಸಂಘದ ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಟಿ. ಚಂದ್ರಶೇಖರ, ಎಲ್. ಪಾಪಣ್ಣ, ಹನುಮಂತರೆಡ್ಡಿ, ಗಂಗಾಮೂರ್ತಿ, ಚಿತ್ತಯ್ಯ, ವೆಂಕಟೇಶ್, ಅನುಸೂಯಮ್ಮ, ಯರ್ರೀಸ್ವಾಮಿ, ಜಯರಾಮ್, ವೀರೇಶ್, ನಾಗರಾಜ್, ಮೈಲಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments