ಹೊಸಪೇಟೆ, ವಿಜಯನಗರ ಜಿಲ್ಲೆ:
ನಗರದ 23ನೇ ವಾರ್ಡ್ ಕಾರಿಗನೂರಿನಲ್ಲಿ ಭಾವೈಕ್ಯತೆ, ಶಾಂತಿ ಮತ್ತು ಸೌಹಾರ್ದತೆಗೆ ಸಾಕ್ಷಿಯಾದಂತೆ ಮೊಹರಂ ಹಬ್ಬವನ್ನು ಭಕ್ತಿಭಾವಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಹಬ್ಬದ ಅಂಗವಾಗಿ ಕಾರಿಗನೂರಿನ ಯುವಕರು ಮತ್ತು ಹಿರಿಯರು ಹಲವು ಸಮುದಾಯದವರೊಂದಿಗೆ ಶಾಂತಿಯುತ ವಾತಾವರಣದಲ್ಲಿ ಶಿರೋವಂದನೆ ಸಲ್ಲಿಸಿ, ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ನೃತ್ಯ ನಡೆಸಿ, ಸಮಾನತೆಯ ಸಂದೇಶವನ್ನು ಸಾರಿದರು. ಈ ಹಬ್ಬದಲ್ಲಿ ಭಾಗವಹಿಸಿದ ಭಕ್ತರು ಸಮುದಾಯ ಭೇದವಿಲ್ಲದೆ ಒಟ್ಟಾಗಿ ಸಂಭ್ರಮಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹೇಬಣ್ಣ ಮಾತನಾಡುತ್ತಾ, “ಅನೇಕ ವರ್ಷಗಳಿಂದ ಕಾರಿಗನೂರಿನಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾ ಬಂದಿದ್ದು, ಭಗವಂತನು ಎಲ್ಲರಲ್ಲೂ ಶಾಂತಿ, ನೆಮ್ಮದಿ, ಆರೋಗ್ಯ ಹಾಗೂ ಆಯುಷ್ಯ ದಯಪಾಲಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಹಾಜರಿದ್ದು, ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶಿಸ್ತಿನಿಂದ ಆಚರಿಸಿದರು. ಪ್ರಮುಖವಾಗಿ ಈ ಕಾರ್ಯಕ್ರಮದಲ್ಲಿ ಮುಖಂಡರಾದ ಪೂಜಾರಿ ತಿಪ್ಪಣ್ಣ, ಮೇಸ್ತ್ರಿ ರಾಮಾಂಜಿನಿ ಮೌಲಾ, ಸಣ್ಣ ಹುಲಿ, ಹುಲುಗಪ್ಪ, ಸುಂಕಪ್ಪ, ತಿಮ್ಮ, ಹನುಮಂತ, ಯಮನೂರ, ರವಿ, ಅಂಜಿನಿ, ಅನೀಲ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ಹಬ್ಬದ ಆಚರಣೆಯು ಸ್ಥಳೀಯರ ನಡುವೆ ಭಾವೈಕ್ಯತೆ ಮತ್ತು ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ.