ಬೆಂಗಳೂರು, ಮೇ 08: ರಾಜ್ಯದ ಇಂಧನ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಎಸ್ಕಾಂಗಳ ಸಿಬ್ಬಂದಿಗಳು ಕರ್ತವ್ಯದ ವೇಳೆ ಕಡ್ಡಾಯವಾಗಿ ಸಮವಸ್ತ್ರ ಹಾಗೂ ಅಧಿಕೃತ ಗುರುತಿನ ಚೀಟಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕ್ ಸೇರಿದಂತೆ ಇಂಧನ ಇಲಾಖೆಯ ಅಧೀನದಲ್ಲಿರುವ ಎಲ್ಲಾ ನಿಗಮಗಳು ಮತ್ತು ಸಂಸ್ಥೆಗಳ ಸಿಬ್ಬಂದಿಗಳಿಗೆ ಈ ನಿಯಮ ಅನ್ವಯವಾಗಲಿದೆ.
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಇಂಧನ ಸಚಿವರಿಗೆ ಬರೆದಿದ್ದ ಪತ್ರದ ಹಿನ್ನೆಲೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಆತಂಕ ಹಾಗೂ ನಕಲಿ ಸಿಬ್ಬಂದಿಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಈ ಆದೇಶ ಜಾರಿಗೊಳಿಸಲಾಗಿದೆ.

ಇತ್ತೀಚೆಗೆ ಹುಬ್ಬಳ್ಳಿಯ ಆನಂದನಗರ ಪ್ರದೇಶದಲ್ಲಿ ಸಮವಸ್ತ್ರ ಧರಿಸಿಕೊಂಡು ತಾನು ಇಂಧನ ಇಲಾಖೆಯ ಬಿಲ್ ಕಲೆಕ್ಟರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಸಾರ್ವಜನಿಕರು ಅನುಮಾನಗೊಂಡು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಿತ್ತು.

ಈ ಹಿನ್ನೆಲೆಯಲ್ಲಿ ನಿಜವಾದ ಇಂಧನ ಇಲಾಖೆಯ ಸಿಬ್ಬಂದಿಗಳನ್ನೇ ಜನರು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಗೆ ತೆರಳುವ ಬಿಲ್ ಕಲೆಕ್ಟರ್ಗಳು, ಮೀಟರ್ ರೀಡರ್ಗಳು ಹಾಗೂ ಲೈನ್ ಮ್ಯಾನ್ಗಳ ಬಗ್ಗೆ ಗ್ರಾಹಕರು ಆತಂಕ ವ್ಯಕ್ತಪಡಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಎಲ್ಲಾ ಎಸ್ಕಾಂಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕರ್ತವ್ಯದ ವೇಳೆ ಸಿಬ್ಬಂದಿಗಳು ಇಲಾಖೆಯ ನಿಗದಿತ ಸಮವಸ್ತ್ರ ಧರಿಸಬೇಕು. ಜೊತೆಗೆ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿಯನ್ನು ಸ್ಪಷ್ಟವಾಗಿ ಕಾಣುವಂತೆ ಹಾಕಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.
ಇದಲ್ಲದೆ ಸಿಬ್ಬಂದಿಗಳು ಶುಭ್ರ ಹಾಗೂ ಶಿಸ್ತಿನ ಉಡುಗೆ ಧರಿಸಬೇಕು. ತಲೆ ಕೂದಲು ಹಾಗೂ ಗಡ್ಡವನ್ನು ಸುವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು ಎಂಬ ಸೂಚನೆಯೂ ನೀಡಲಾಗಿದೆ. ಸಾರ್ವಜನಿಕರ ಮನೆಗಳಿಗೆ ತೆರಳುವ ಸಿಬ್ಬಂದಿಗಳು ತಮ್ಮ ಗುರುತು ಸ್ಪಷ್ಟಪಡಿಸಿ, ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವ ರೀತಿಯಲ್ಲಿ ವರ್ತಿಸಬೇಕೆಂದು ಸೂಚಿಸಲಾಗಿದೆ.
ನಕಲಿ ಬಿಲ್ ಕಲೆಕ್ಟರ್, ಮೀಟರ್ ರೀಡರ್ ಹಾಗೂ ಲೈನ್ ಮ್ಯಾನ್ಗಳ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಹ ಸರ್ಕಾರ ಸೂಚಿಸಿದೆ. ಪ್ರತಿ ಎಸ್ಕಾಂ ವ್ಯಾಪ್ತಿಯಲ್ಲಿರುವ ಕಚೇರಿಗಳು ತಮ್ಮ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನ ನಡೆಸಬೇಕಾಗಿದೆ.
ಸಾಮಾಜಿಕ ಜಾಲತಾಣಗಳು, ಎಫ್ಎಂ ರೇಡಿಯೋ, ಸ್ಥಳೀಯ ಟಿವಿ ವಾಹಿನಿಗಳು, ಪತ್ರಿಕೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಣೆಗಳನ್ನು ನೀಡಿ ಗ್ರಾಹಕರಿಗೆ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ. ನಿಜವಾದ ಸಿಬ್ಬಂದಿಗಳನ್ನು ಹೇಗೆ ಗುರುತಿಸಬೇಕು, ಗುರುತಿನ ಚೀಟಿ ಪರಿಶೀಲನೆ ಯಾಕೆ ಅಗತ್ಯ ಎಂಬ ಕುರಿತು ಜನರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇಂಧನ ಇಲಾಖೆಯ ಈ ಕ್ರಮದಿಂದ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಆತಂಕ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಜೊತೆಗೆ ನಕಲಿ ಸಿಬ್ಬಂದಿಗಳ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
